ವಿನಯ ಕುಲಕರ್ಣಿ ಮನೆ ಮೇಲೆ ದಾಳಿ

0
31

ವಂಚನೆ ಪ್ರಕರಣದಲ್ಲಿ ಇಡಿಯಿಂದ ಐಶ್ವರ್ಯಗೌಡ ಬಂಧನ

ಬೆಂಗಳೂರು: ಚಿನ್ನ ವಂಚನೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಐಶ್ವರ್ಯಗೌಡ ಅವರ ಬೆಂಗಳೂರು ಹಾಗೂ ಮಂಡ್ಯದ ನಿವಾಸ, ಧಾರವಾಡ ಗ್ರಾಮಾಂತರ ಕ್ಷೇತ್ರದ ಕಾಂಗ್ರೆಸ್ ಶಾಸಕ ವಿನಯ್ ಕುಲಕರ್ಣಿ ಅವರ ಮನೆಗಳ ಮೇಲೆ ಗುರುವಾರ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ದಾಳಿ ಬಳಿಕ ಸಂಜೆ ಐಶ್ವರ್ಯಗೌಡ ಅವರನ್ನು ಬಂಧನಕ್ಕೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಬೆಂಗಳೂರಿನ ಸಂಜಯನಗರದಲ್ಲಿರುವ ಶಾಸಕ ವಿನಯ್ ಕುಲಕರ್ಣಿ ಮನೆ, ಐಶ್ವರ್ಯ ಗೌಡಗೆ ಸೇರಿದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಮನೆ ಹಾಗೂ ಬೆಂಗಳೂರಿನ ನಿವಾಸದ ಮೇಲೆ ದಾಳಿ ನಡೆದಿದ್ದು, ಕಡತಗಳು ಹಾಗೂ ದಾಖಲೆಗಳ ಶೋಧ ನಡೆಸಿದ್ದಾರೆ.
ಇಡಿ ಅಧಿಕಾರಿಗಳು ದಾಳಿ ನಡೆಸಿದ ವೇಳೆ ಸಿಆರ್‌ಪಿಎಫ್ ಸಿಬ್ಬಂದಿಯಿಂದ ಭದ್ರತೆ ನೀಡಲಾಗಿತ್ತು.
ಈ ಹಿಂದೆ ಐಶ್ವರ್ಯ ಗೌಡ ವಿರುದ್ಧ ಸುಮಾರು ೯ ಕೋಟಿ ರೂ. ಮೌಲ್ಯದ ಚಿನ್ನ ವಂಚನೆ ಆರೋಪ ಕೇಳಿಬಂದಿತ್ತು. ವಾರಾಹಿ ವರ್ಲ್ಡ್ ಆಫ್ ಗೋಲ್ಡ್ ಜುವೆಲ್ಲರಿಯ ಮಾಲೀಕರಿಗೆ ಐಶ್ವರ್ಯ ಗೌಡ ವಂಚನೆ ಮಾಡಿದ್ದಾರೆ ಎಂಬ ಕುರಿತಂತೆ ದೂರುದಾಖಲಾಗಿತ್ತು. ಮಾಜ ಸಂಸದ ಡಿಕೆ ಸುರೇಶ್ ಹೆಸರಿನಲ್ಲಿ ವಂಚನೆ ಎಸಗಿದ್ದರು ಎನ್ನಲಾಗಿದೆ. ಈ ವಿಚಾರವಾಗಿ ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ೨೦೨೪ರ ಡಿಸೆಂಬರ್‌ನಲ್ಲೇ ಡಿ.ಕೆ. ಸುರೇಶ್ ದೂರು ನೀಡಿದ್ದರು.
ಪ್ರಕರಣ ಸಂಬಂಧ ಕಳೆದ ಡಿಸೆಂಬರ್‌ನಲ್ಲಿ ಐಶ್ವರ್ಯಗೌಡ ಮತ್ತು ಆಕೆಯ ಪತಿ ಕೆಎನ್ ಹರೀಶ್ ಅವರನ್ನು ಬಂಧಿಸಲಾಗಿತ್ತು. ಅದಾದ ನಂತರ ಐಶ್ವರ್ಯ ಗೌಡ ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಿ ಕೋರ್ಟ್ ಆದೇಶಿಸಿತ್ತು.
ಕೆಲ ದಿನಗಳ ಹಿಂದೆ ಚಿನ್ನ ಹಾಗೂ ಕೆಲ ವ್ಯವಹಾರದಲ್ಲಿ ಐಶ್ವರ್ಯಾ ಗೌಡ ಹಾಗೂ ಶಿಲ್ಪಾ ಗೌಡ ಎಂಬುವವರು ವಂಚನೆ ಮಾಡಿದ್ದರು ಎಂಬ ಆರೋಪ ಕೇಳಿ ಬಂದಿತ್ತು. ತನಿಖೆ ವೇಳೆ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಸಿರುವುದು ಪತ್ತೆಯಾಗಿತ್ತು.

Previous articleಪಾಕ್‌ನಿಂದ ಎಲ್ಲಾ ಭಾರತೀಯರು ವಾಪಸ್ ಬನ್ನಿ: ಕೇಂದ್ರದ ಸೂಚನೆ
Next articleಉಗ್ರರ ಹೇಯ ಕೃತ್ಯ ಬೆಂಬಲಿಸಿ‌ ಪೋಸ್ಟ್‌: ದೂರು