ಹುಬ್ಬಳ್ಳಿ: ಗುರುವಾರ ಬೆಳಗಾವಿಯ ಸುವರ್ಣ ವಿಧಾನ ಸೌಧದಲ್ಲಿ ನಡೆದ ಚಳಿಗಾಳದ ಅಧಿವೇಶನದ ಕೊನೆಯ ದಿನ ನಡೆದ ಕಲಾಪದ ನಂತರ ನಡೆದ ಘಟನಾವಳಿಗಳು ವಿಧಾನ ಪರಿಷತ್ ಸದಸ್ಯರ ಹಕ್ಕುಚ್ಯುತಿಯಾಗಿದ್ದು, ಈ ಬಗ್ಗೆ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಂಡು ಶಾಸಕರಿಗೆ ಆಗಿರುವ ಹಕ್ಕುಚ್ಯುತಿಗೆ ನ್ಯಾಯ ದೊರಕಿಸಿಕೊಡಬೇಕು ಎಂದು ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ ಹಾಗೂ ಡಿ.ಎಸ್ ಅರುಣ್ ಅವರು ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿಯವರಿಗೆ ಮನವಿ ಸಲ್ಲಿಸಿದರು.
ಶುಕ್ರವಾರ ರಾತ್ರಿ ಸಭಾಪತಿ ಹೊರಟ್ಟಿಯವರ ನಿವಾಸಕ್ಕೆ ಆಗಮಿಸಿ ಉಭಯ ಶಾಸಕರು, ಕಲಾಪ ಮುಗಿದ ನಂತರ ನಡೆದ ಘಟನಾವಳಿಗಳ ಬಗ್ಗೆ ಆಘಾತ ವ್ಯಕ್ತಪಡಿಸಿದರು.
ವಿಧಾನ ಪರಿಷತ್ತು ಶಾಸಕರು ನಡೆದುಕೊಂಡು ಹೋಗುವಾಗಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರ ಆಪ್ತ ಸಹಾಯಕ ಮತ್ತು ಕಿಡಿಗೇಡಿಗಳು ಹಲ್ಲೆ ಮಾಡಿದ್ದಾರೆ. ಪರಿಷತ್ ಸದಸ್ಯರಾದ ಸಿ.ಟಿ ರವಿ ಅವರನ್ನು ಏಕಾಏಕಿಯಾಗಿ ಎಳೆದುಕೊಂದು ಪೊಲೀಸರು ಬಂಧಿಸಿ ಹಿರೇಬಾಗೇವಾಡಿ, ಖಾನಾಪುರ ಪೊಲೀಸ್ ಠಾಣೆ ಕರೆದೊಯ್ದರು. ಯಾವ ಕಾರಣಕ್ಕಾಗಿ ಬಂಧನ ಮಾಡಲಾಗಿದೆ ಎಂಬುದನ್ನ ತಿಳಿಸಲಿಲ್ಲ. ರಾತ್ರಿ ೮ಕ್ಕೆ ಖಾನಾಪುರ ಠಾಣೆಯಲ್ಲಿ ಸಿ.ಟಿ ರವಿ ಅವರನ್ನು ಇರಿಸಿದ್ದರು. ಅಲ್ಲಿ ನಾವು ತಕ್ಷಣ ಪ್ರತಿ ದೂರು ದಾಖಲು ಮಾಡಲು ಮುಂದಾದರೂ ದಾಖಲಿಸಿಕೊಳ್ಳಲಿಲ್ಲ. ಝೀರೊ ಎಫ್‌ಐಆರ್ ಕೂಡಾ ದಾಖಲಿಸಿಕೊಳ್ಳಲಿಲ್ಲ. ಆಯುಕ್ತ ಎಡಾ ಮಾರ್ಟಿನ್, ಡಿಸಿಪಿ ರೋಹನ್ ಜಗದೀಶ್ ಇದ್ದರೂ ಸ್ಪಂದಿಸಲಿಲ್ಲ ಎಂದು ಮನವಿಯಲ್ಲಿ ಶಾಸಕರು ವಿವರಿಸಿದ್ದಾರೆ.
ಬಳಿಕ ಏಕಾಏಕಿಯಾಗಿ ಸಿ.ಟಿ ರವಿಯವರನ್ನು ಪೊಲೀಸ್ ಜೀಪಿನಲ್ಲಿ ಕರೆದುಕೊಂಡು ಬೆಳಗಾವಿ, ಬೆಳಗಾವಿ ಜಿಲ್ಲೆಯ ಸುತ್ತಮುತ್ತ ಸುತ್ತಾಡಿಸಿ ಶುಕ್ರವಾರ ಬೆಳಿಗ್ಗೆ ೧೦.೩೦ಕ್ಕೆ ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ ಎಂದು ತಿಳಿಸಿದ್ದಾರೆ. ಈ ಪ್ರಕರಣದಿಂದ ಎಲ್ಲ ಶಾಸಕರಿಗೆ ಹಕ್ಕುಚ್ಯುತಿಯಾಗಿದೆ. ನ್ಯಾಯ ದೊರಕಿಸಿಕೊಡಬೇಕು ಎಂದು ಮನವಿಯಲ್ಲಿ ಕೋರಿದ್ದಾರೆ.