ವಿದೇಶಿ ಪ್ರವಾಸಿಗರ ಮೇಲೆ ದಾಳಿ: ಓರ್ವ ನಾಪತ್ತೆ

ಕೊಪ್ಪಳ(ಗಂಗಾವತಿ): ಸಾಣಾಪುರ ಕೆರೆ(ಲೇಕ) ಗಂಗಮ್ಮನ ಗುಡಿಹತ್ತಿರ ವಿದೇಶಿಗರ ಮೇಲೆ ಅಪರಿಚಿತ ಗೂಂಡಾಗಳು ದಾಳಿ ನಡೆಸಿ ಲೈಂಗಿಕ ಮತ್ತು ದೈಹಿಕ ಹಲ್ಲೆ ನಡೆಸಿದ ಪರಿಣಾಮ ಇಬ್ಬರು ವಿದೇಶಿ ಹಾಗೂ ಇಬ್ಬರು ದೇಶೀಯ ಪ್ರವಾಸಿಗರು ಗಾಯಗೊಂಡಿದ್ದಾರೆ. ಇನ್ನೊಬ್ಬ ನಾಪತ್ತೆಯಾಗಿದ್ದಾರೆನ್ನಲಾಗಿದೆ.
ಇಸ್ರೇಲ್ ಮೂಲದ ನಾಮಾ(೨೭), ಅಮೆರಿಕ ಮೂಲದ ಡ್ಯಾನಿಯೇಲ್(೨೩), ಮಹಾರಾಷ್ಟ್ರದ ನಾಸಿಕ್ ಪಂಕಜ್(೪೩), ಸ್ಥಳೀಯ ಆನೆಗೊಂದಿ ಹಾರ್ಟ್ ಲೈನ್ ಹ್ಯಾಪಿ ಹೋಂ ರೆಸಾರ್ಟ್ ಮಾಲಿಕರಾದ ಅಂಬಿಕಾ ನಾಯ್ಕ(೨೯) ಹಾಗೂ ಡಿ.ಬಾಸ್(೪೨) ಇವರು ಲಘು ಸಂಗೀತ ಕಚೇರಿ ಏರ್ಪಡಿಸಿದ್ದರು. ಆಗ ಮೂವರು ಅಪರಿಚಿತರು ಏಕಾಏಕಿ ಹೆಣ್ಣುಮಕ್ಕಳ ಮೇಲೆ ದಾಳಿ ನಡೆಸಿದರು. ಡ್ಯಾನಿಯೇಲ್, ಪಂಕಜ್ ಹಾಗೂ ಡಿ.ಬಾಸ್ ವಿರೋಧ ವ್ಯಕ್ತಪಡಿಸಿದರು. ಅಪರಿಚಿತರು ಡ್ಯಾನಿಯೇಲ್, ಪಂಕಜ್ ಹಾಗೂ ಡಿ.ಬಾಸ್ ಅವರನ್ನು ಪಕ್ಕದ ಎಡದಂಡೆ ಕಾಲುವೆಗೆ ನೂಕಿದ್ದಾರೆ. ಡ್ಯಾನಿಯೇಲ್, ಪಂಕಜ್ ಕಾಲುವೆಯಿಂದ ಮೇಲೆ ಬಂದು ಹೆಣ್ಣುಮಕ್ಕಳನ್ನು ಸಂರಕ್ಷಣೆ ಮಾಡಿದ್ದು ಡಿ.ಬಾಸ್ ನಾಪತ್ತೆಯಾಗಿದ್ದಾರೆನ್ನಲಾಗಿದೆ. ಸ್ಥಳಕ್ಕೆ ಬಳ್ಳಾರಿ ವಲಯ ಐಜಿಪಿ ಹಾಗೂ ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ತಂಡ ಭೇಟಿ ನೀಡಿ ಪರಿಶಿಲಿಸುತ್ತಿದೆ.