ಮೂಡಿಗೆರೆ: ಕಳಸ ತಾಲ್ಲೂಕಿನ ಹೊರನಾಡಿನ ಆದಿಶಕ್ತ್ಯಾತ್ಮಕ ಶ್ರೀ ಅನ್ನಪೂರ್ಣೇಶ್ವರಿ ಅಮ್ಮನವರ ಜಾತ್ರಾ ಮಹೋತ್ಸವದ ರಥೋತ್ಸವವು ಭಾನುವಾರ ವಿಜೃಂಭಣೆಯಿಂದ ನೆರೆವೇರಿತು.
ಭಾನುವಾರ ಬೆಳಿಗ್ಗೆ ಪೂಜೆಯ ನಂತರ ಉತ್ಸವ ಮೂರ್ತಿಯ ಸುತ್ತು ಸೇವೆ ನಡೆದು ನಂತರ ಸ್ತುತಿ ಪಾಠಕರು ಸ್ತುತಿ ಘೋಷಗಳನ್ನು ಪಟಿಸುತ್ತಾ,ಛತ್ರಿ ಛಾಮರ ಮಂಗಳವಾದ್ಯಗಳೊಂದಿಗೆ ಹೂವಿನ ಅಲಂಕಾರದೊಂದಿಗೆ ಸಿಂಗರಿಸಿ ಶ್ರೀ ದೇವರ ಉತ್ಸವ ಮೂರ್ತಿಯನ್ನು ಹೊತ್ತುಕೊಂಡು ಸುಂದರವಾಗಿ ಅಲಂಕರಿಸಿದ ಬ್ರಹ್ಮರಥದ ಬಳಿ ದೇವರನ್ನು ತರಲಾಯಿತು. ರಥದಬಳಿ ಬಂದ ಜಗನ್ಮಾತೆ ಅನ್ನಪೂರ್ಣೇಶ್ವರಿಯನ್ನು ಭವ್ಯ ರಥದಲ್ಲಿ ಕುಳ್ಳಿರಿಸಿ ಪೂಜೆಯನ್ನು ಮಾಡಲಾಯಿತು.
ಶ್ರೀ ಕ್ಷೇತ್ರ ಹೊರನಾಡಿನ ಧರ್ಮಕರ್ತ ಡಾ.ಜಿ.ಭೀಮೇಶ್ವರ ಜೋಷಿ ಮಾತನಾಡಿ ವರ್ಷವಿಡಿ ಗರ್ಭಗುಡಿಯಲ್ಲಿ ರುವ ದೇವರು ಬರುವಂತ ಭಕ್ತರಿಗೆ ದರ್ಶನ ಕೊಡುತ್ತಾಳೆ. ರಥೋತ್ಸವದ ವಿಷೇಶ ದಿನದಲ್ಲಿ ಜಗನ್ಮಾತೆಯು ಹೊರಬಂದು ದಿವ್ಯ ರಥದಲ್ಲಿ ಕುಳಿತು ಭಕ್ತರಿಗೆ ದರ್ಶನ ನೀಡುವುದೇ ರಥೋತ್ಸವದ ವಿಷೇಶವಾಗಿದೆ ಎಂದು ತಿಳಿಸಿದರು.