ಬೆಳಗಾವಿ: ಶಾಸಕ ರಮೇಶ ಜಾರಕಿಹೊಳಿ ನಾಲಿಗೆ ಬಿಗಿ ಹಿಡಿದು ಮಾತನಾಡಲಿ ಎಂದು ಎಚ್ಚರಿಕೆ ನೀಡಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವಿರುದ್ಧ ಶಾಸಕ ರಮೇಶ ಜಾರಕಿಹೊಳಿ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಗೋಕಾಕ ತಾಲೂಕಿನ ಅಂಕಲಗಿ ಗ್ರಾಮದಲ್ಲಿ ಮಾತನಾಡಿದ ಶಾಸಕ ರಮೇಶ ಜಾರಕಿಹೊಳಿ ಅವರು, ವಿಜಯೇಂದ್ರ ನೀನು ಬಚ್ಚಾ, ನೀನು ಅಧ್ಯಕ್ಷ ಸ್ಥಾನಕ್ಕೆ ಯೋಗ್ಯನಲ್ಲ. ನಾನು ಇಂದಿಗೂ ಯಡಿಯೂರಪ್ಪ ವಿರುದ್ಧ ಅಗೌರವದಿಂದ ಮಾತನಾಡಿಲ್ಲ. ಇಂದಿಗೂ ನನಗೆ ಯಡಿಯೂರಪ್ಪ ಮೇಲೆ ಗೌರವ ಇದೆ. ಆದರೆ ನೀನು ಸುಳ್ಳು ಹೇಳುವುದನ್ನು ಬಿಡು ಎಂದು ಹರಿಹಾಯ್ದರು.
ನಾನು ವಿಜಯೇಂದ್ರ ಮನೆಯಿಂದಲೇ ಪ್ರವಾಸ ಮಾಡುತ್ತೇನೆ. ನಿನ್ನ ಸವಾಲನ್ನು ಸ್ವೀಕರಿಸಿದ್ದೇನೆ. ನೀನೇ ದಿನಾಂಕ ನಿಗದಿ ಮಾಡು. ಬೆಂಬಲಿಗರು, ಗನ್ ಮ್ಯಾನ್, ಯಾರೂ ಬರಲ್ಲ, ನಾನೊಬ್ಬನೇ ಬರ್ತೀನಿ. ಶಿಕಾರಿಪುರದಿಂದಲೇ ಪ್ರವಾಸ ಆರಂಭಿಸುತ್ತೇನೆ. ಸಾಧ್ಯವಾದರೆ ತಡಿ ನೋಡೋಣ ಎಂದು ಸವಾಲು ಹಾಕಿದರು.
ನಿನ್ನನ್ನು ಬೇಕಾದರೆ ಮೂಲೆ ಮೂಲೆಯಲ್ಲಿ ಓಡಾಡಲು ಬಿಡದ ಹಾಗೆ ಮಾಡಲು ಶಕ್ತಿ ನನಗಿದೆ. ನಿನ್ನಷ್ಟು ಕೀಳು ಮಟ್ಟದ ರಾಜಕಾರಣಿ ನಾನಲ್ಲ. ಬಿ.ವೈ. ವಿಜಯೇಂದ್ರ ಮೇಲೆ ನನಗೆ ಗೌರವ ಇಲ್ಲ. ಆದರೆ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ಗೌರವ ಇದೆ. ನಮ್ಮ ಪಕ್ಷದಲ್ಲಿ ಜಗಳ ಇರೋದು ಅಧ್ಯಕ್ಷರ ಬದಲಾವಣೆಗಾಗಿ ಅಷ್ಟೇ ಎಂದು ರಮೇಶ ಜಾರಕಿಹೊಳಿ ಹೇಳಿದರು.