ವಿಚಾರಣೆಗೆ ಹಾಜರಾದ ಐಜಿಪಿ ಸಂದೀಪ್ ಪಾಟೀಲ್

0
17

ಶಿವಕುಮಾರ್ ಮೆಣಸಿನಕಾಯಿ
ಬೆಂಗಳೂರು: ಬಹುಕೋಟಿ ಬಿಟ್‌ಕಾಯಿನ್ ಹಗರಣದ ತನಿಖೆಯು ಮಹತ್ವದ ಘಟ್ಟ ತಲುಪಿದ್ದು, ಹಿರಿಯ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಸಿಐಡಿಯ ವಿಶೇಷ ತನಿಖಾ ದಳದ (ಎಸ್‌ಐಟಿ) ಎದುರು ಬುಧವಾರ ಹಾಜರಾಗಿದ್ದಾರೆ.
ನಗರದ ಕಾರ್ಲ್ಟನ್ ಭವನದಲ್ಲಿರುವ ಅಪರಾಧ ತನಿಖಾ ವಿಭಾಗದ (ಸಿಐಡಿ) ಕೇಂದ್ರ ಕಚೇರಿಯಲ್ಲಿರುವ ಸಿಐಡಿ ಎಡಿಜಿಪಿ ಹಾಗೂ ಎಸ್‌ಐಟಿ ಮುಖ್ಯಸ್ಥ ಮನೀಶ್ ಖರ್ಬಿಕರ್ ಎದುರು ಸಂದೀಪ್ ಪಾಟೀಲ್ ವಿಚಾರಣೆಗೆ ಒಳಗಾದರು.
ಹಿಂದೆ ಬಿಟ್‌ಕಾಯಿನ್ ಹಗರಣ ಸಂಭವಿಸಿದ ವೇಳೆ ಬೆಂಗಳೂರು ನಗರದ ಅಪರಾಧ ವಿಭಾಗದ ಜಂಟಿ ಪೊಲೀಸ್ ಆಯುಕ್ತರಾಗಿದ್ದ ಹಾಗೂ ಸದ್ಯ ಕೆಎಸ್‌ಆರ್‌ಪಿಯ ಐಜಿಪಿಯಾಗಿರುವ ಸಂದೀಪ್ ಪಾಟೀಲ್ ಅವರನ್ನು ಸರಿಸುಮಾರು ೨ ಗಂಟೆಗಳ ಕಾಲ ವಿಚಾರಣೆ ನಡೆಸಲಾಯಿತು.
ಮೂಲಗಳ ಪ್ರಕಾರ, ಮುಂದಿನ ಸೋಮವಾರದ ಒಳಗಾಗಿ ಮತ್ತೊಮ್ಮೆ ಸಂದೀಪ್ ಪಾಟೀಲ್ ಅವರನ್ನು ವಿಚಾರಣೆಗೆ ಕರೆಯಲಾಗುತ್ತದೆ ಎನ್ನಲಾಗಿದೆ.
ಇಡೀ ಹಗರಣದ ಕೇಂದ್ರ ಬಿಂದುವಾಗಿರುವ ಪ್ರಮುಖ ಆರೋಪಿ ಶ್ರೀಕಿ ನೀಡಿರುವ ಹೇಳಿಕೆ ಆಧರಿಸಿ ಐಪಿಎಸ್ ಅಧಿಕಾರಿ ಸಂದೀಪ್ ಪಾಟೀಲ್ ಅವರನ್ನು ವಿಚಾರಣೆಗೆ ಒಳಪಡಿಸಲಾಗಿದ್ದು, ಹಿಂದೆ ತನಿಖೆ ನಡೆಸಿದ ಡಿವೈಎಸ್‌ಪಿ, ಇನ್ಸ್ಪೆಕ್ಟರ್ ಹಾಗೂ ಸಬ್ ಇನ್ಸ್ಪೆಕ್ಟರ್‌ಗಳು ಎಸಗಿದ ಪ್ರಮಾದಗಳ ಬಗೆಗೆ ತನಿಖಾದಳ ಮಾಹಿತಿ ಪಡೆದಿದೆ ಎನ್ನಲಾಗುತ್ತಿದೆ.
ಈ ಮಧ್ಯೆ ಎಸ್‌ಐಟಿ ಅಧಿಕಾರಿಗಳು ಬಿಟ್‌ಕಾಯಿನ್ ಹಗರಣದಲ್ಲಿ ಶಾಮೀಲಾಗಿದ್ದಾರೆ ಎನ್ನಲಾದ ಬೆಂಗಳೂರು ಮೂಲದವರೇ ಆದ ಯುನಿಕಾಯಿನ್ ಎಂಬ ಕ್ರಿಪ್ಟೊ ಕರೆನ್ಸಿ ಕಂಪನಿಯ ಅಧಿಕಾರಿಗಳನ್ನು ಮತ್ತೆ ವಿಚಾರಣೆಗೆ ಒಳಪಡಿಸಲು ಎಸ್‌ಐಟಿ ನಿರ್ಧರಿಸಿದ್ದು, ಮುಂದಿನ ಮೂರ್ನಾಲ್ಕು ದಿನಗಳ ಕಾಲ ಮತ್ತಷ್ಟು ವ್ಯಕ್ತಿಗಳ ವಿಚಾರಣೆ ಮುಂದುವರಿಯಲಿದೆ. ಕೆಲ ಪೊಲೀಸ್ ಅಧಿಕಾರಿಗಳು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, ಅರ್ಜಿ ಇತ್ಯರ್ಥದ ನಂತರ ಎಸ್‌ಐಟಿ ಮುಂದಿನ ಕಾನೂನಾತ್ಮಕ ಕ್ರಮ ನಡೆಸಲಿದೆ ಎಂದು ಮೂಲಗಳು ಹೇಳಿವೆ.
ಹೇಳಿಕೆ ದಾಖಲು
ವಿಚಾರಣೆಯಲ್ಲಿ ೨೦೧೯ರಿಂದ ೨೦೨೧ರ ಅವಧಿಯಲ್ಲಿ ಅಂತಾರಾಷ್ಟ್ರೀಯ ಹ್ಯಾಕರ್ ಶ್ರೀಕಿ ಅಲಿಯಾಸ್ ಶ್ರೀಕೃಷ್ಣ ಕ್ರಿಪ್ಟೊ ಕರೆನ್ಸಿಗಳನ್ನು ಹ್ಯಾಕ್ ಮಾಡಿದ ವಿವರ ಹಾಗೂ ಅದರ ಮೇಲೆ ನಡೆದ ತನಿಖೆ ಬಗೆಗೆ ಎಸ್‌ಐಟಿ ಅಧಿಕಾರಿಗಳು ಸಂದೀಪ್ ಪಾಟೀಲ್ ಅವರಿಂದ ಹೇಳಿಕೆ ದಾಖಲಿಸಿಕೊಂಡಿದ್ದಾರೆ. ಅಲ್ಲದೇ ಪೊಲೀಸ್ ಕಸ್ಟಡಿಯಲ್ಲೇ ಆರೋಪಿ ಶ್ರೀಕಿ ಸರಿಸುಮಾರು ೧ ಸಾವಿರ ಬಿಟ್‌ಕಾಯಿನ್‌ಗಳನ್ನು ಹ್ಯಾಕ್ ಮಾಡಿದ ಹಾಗೂ ಕೆಲವು ಪೊಲೀಸ್ ಅಧಿಕಾರಿಗಳು ಮತ್ತು ರಾಜಕಾರಣಿಗಳ ಖಾತೆಗಳಿಗೆ ಬಿಟ್‌ಕಾಯಿನ್ ವರ್ಗಾಯಿಸಿದ ಬಗೆಗೂ ವಿಚಾರಣೆ ನಡೆಸಿದ್ದಾರೆ ಎಂದು ಎಸ್‌ಐಟಿ ಮೂಲಗಳು ತಿಳಿಸಿವೆ. ಸಂದೀಪ್ ಪಾಟೀಲ್ ಅವರು ಎಸ್‌ಐಟಿ ಅವರು ಸಿದ್ಧಪಡಿಸಿದ್ದ ಪ್ರಶ್ನಾವಳಿಗೆ ಉತ್ತರ ನೀಡಿದ್ದು, ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಆದರೆ ಇನ್ನಷ್ಟು ಮಾಹಿತಿಯನ್ನು ಎಸ್‌ಐಟಿ ಬಯಸಿದ್ದು, ಮತ್ತೆ ವಿಚಾರಣೆಗೆ ಹಾಜರಾಗಬೇಕಾಗುತ್ತದೆ ಎಂದು ಹೇಳಿದ್ದಾರೆ ಎನ್ನಲಾಗಿದೆ.

Previous articleನ್ಯಾಯಾಂಗ ಕ್ಷೇತ್ರದ ಸೂರ್ಯ ಅಸ್ತಂಗತ
Next articleIFS ಅಧಿಕಾರಿ ಶಿವಾನಂದ ನಾಯಕವಾಡಿ ಅಮಾನತು