ವಿಕೃತ ಮೆರೆದ ಮಸ್ಕಿ ಶಾಸಕನ ಸಹೋದರ, ಪುತ್ರ

ರಾಯಚೂರು: ಮಸ್ಕಿ ಕ್ಷೇತ್ರದ ಕಾಂಗ್ರೆಸ್ ಶಾಸಕ ಬಸನಗೌಡ ತುರ್ವಿಹಾಳ ಅವರ ಪುತ್ರ ಸತೀಶಗೌಡ ಹಾಗೂ ಸಹೋದರ ಸಿದ್ಧನಗೌಡ ಅವರು ಮೊಲಗಳನ್ನು ಬೇಟೆಯಾಡಿ ಮಾರಕಾಸ್ತ್ರಗಳನ್ನು ಹಿಡಿದುಕೊಂಡು ಮೆರವಣಿಗೆ ನಡೆಸುವ ಮೂಲಕ ವಿಕೃತ ಮೆರೆದಿರುವ ಘಟನೆ ಸೋಮವಾರ ಸಿಂಧನೂರು ತಾಲ್ಲೂಕಿನ ತುರ್ವಿಹಾಳ ಗ್ರಾಮದಲ್ಲಿ ನಡೆದಿದ್ದು ವಿಡಿಯೊಗಳು ಸಾಮಾಜಿಕ ತಾಣಗಳಲ್ಲಿ ಹರಿದಾಡುತ್ತಿವೆ.
ತುರ್ವಿಹಾಳ ಗ್ರಾಮದಲ್ಲಿ ನಡೆದ ಶಂಕರಲಿಂಗೇಶ್ವರ ಜಾತ್ರೆ ಹಿನ್ನೆಲೆ ಶಾಸಕನ ಕುಟುಂಬದ ಸದಸ್ಯರು ಮೊಲಗಳ ಬೇಟೆಯಾಡಿ ಮಾರಕಾಸ್ತ್ರಗಳನ್ನು ಹಿಡಿದು ಮುಖ್ಯರಸ್ತೆಗಳಲ್ಲಿ ಮೆರವಣಿಗೆ ಮಾಡಿದ್ದಾರೆ. ಕೊಂದ ಮೊಲಗಳನ್ನು ಹಿಡಿದು ಮೆರವಣಿಗೆ ಮಾಡಿದ್ದಾರೆ.
ಪ್ರಾಣಿಗಳನ್ನ ಕೊಂದು ಕಟ್ಟಿಗೆಗೆ ನೇತು ಹಾಕಿ ಕೈಯಲ್ಲಿ ಮಾರಕಾಸ್ತ್ರಗಳನ್ನು ಹಿಡಿದ ಸಂಭ್ರಮಿಸಿರುವುದು ಸಾರ್ವಜನಿಕರ ಆಕ್ರೋಶಕ್ಕೂ ಕಾರಣವಾಗಿದೆ. ಅಲ್ಲದೆ ಯಾವುದೇ ಪಶ್ಚಾತ್ತಾಪವಿಲ್ಲದೆ ಅಟ್ಟಹಾಸ ಮೆರೆದ ವಿಡಿಯೊ, ಫೋಟೋಗಳನ್ನ ವಾಟ್ಸ್ಯಾಪ್ ಸ್ಟೇಟಸ್‌ಗೆ ಹಾಕಿಕೊಂಡು ಸಂಭ್ರಮಿಸಿದ್ದಾರೆ. ವನ್ಯಜೀವಿ ಸಂರಕ್ಷಣಾ ಕಾಯಿದೆ 1972, 51ಅಡಿ ಪ್ರಕರಣ ದಾಖಲು ಸೆಕ್ಷನ್ 9 ಅಡಿ ಪ್ರಕರಣ ದಾಖಲಿಸಿರುವ ಅರಣ್ಯ ಅಧಿಕಾರಿಗಳು ಮೊಲಬೇಟೆ ಹಾಗೂ ಬೇಟೆ ಮಾಡಿದ ಉಪಕರಣಗಳ ಪ್ರದರ್ಶನ ಆರೋಪ ಅಡಿ ಪ್ರಕರಣ ದಾಖಲು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
ಆರೋಪಿಗಳಾದ ಶಾಸಕರ ಸಹೋದರ ಸಿದ್ಧನಗೌಡ ತುರ್ವಿಹಾಳ, ಶಾಸಕರ ಪುತ್ರ ಸತೀಶಗೌಡ, ಸ್ಥಳೀಯರಾದ ದುರ್ಗೇಶ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಅರಣ್ಯ ಅಧಿಕಾರಿ ಪ್ರವೀಣ ಅವರು ತಿಳಿಸಿದ್ದಾರೆ.