ಹುಬ್ಬಳ್ಳಿ: ಇಡೀ ಭಾರತದಲ್ಲಿ ಅತ್ಯಂತ ಮಹತ್ವದ ಧಾರ್ಮಿಕ ಯಾತ್ರಾ ಸ್ಥಳವಾಗಿ ಪ್ರಸಿದ್ಧಿಗೊಂಡಿರುವ ವರೂರಿನ ನವಗ್ರಹ ತೀರ್ಥಕ್ಷೇತ್ರದ ಪ್ರವಾಸೋದ್ಯಮ ಅಭಿವೃದ್ಧಿಗೆ ಎರಡು ಕೋಟಿ ರೂ.ಗಳನ್ನು ಮಂಜೂರು ಮಾಡುವುದಾಗಿ ರಾಜ್ಯ ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ ಘೋಷಿಸಿದರು.
ಸಮೀಪದ ವರೂರು ನವಗ್ರಹ ತೀರ್ಥಕ್ಷೇತ್ರದಲ್ಲಿ ನಿರ್ಮಾಣವಾಗಿರುವ ಸುಮೇರು ಪರ್ವತದ ಪಂಚಲೋಹ ಕಳಸಾರೋಹಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಈ ವರ್ಷ ಮತ್ತು ಮುಂದಿನ ವರ್ಷದ ಸಾಲಿನ ತಲಾ ಒಂದು ಕೋಟಿ ರೂ. ಸೇರಿ ಒಟ್ಟು ಎರಡು ಕೋಟಿ ರೂಗಳನ್ನು ಕ್ಷೇತ್ರಾಭಿವೃದ್ಧಿಗೆ ಬಿಡುಗಡೆ ಮಾಡಲಾಗುವುದು ಎಂದರು.
ಕರ್ನಾಟಕದಲ್ಲಿ ನೂರಾರು ವರ್ಷಗಳ ಹಿಂದೆ ಹೊಯ್ಸಳ, ಚಾಲುಕ್ಯ, ರಾಷ್ಟ್ರಕೂಟ ಅರಸುಗಳ ಕಾಲದಲ್ಲಿ ನಿರ್ಮಾಣಗೊಂಡ ಸುಮಾರು ನಾಲ್ಕು ಸಾವಿರ ಜೈನ ಬಸದಿ, ಮಂದಿರಗಳಿವೆ. ಹಲವು ಅತ್ಯಂತ ಶೋಚನೀಯ ಸ್ಥಿತಿಯಲ್ಲಿವೆ. ಕೆಲವು ಜಾನುವಾರುಗಳ, ಮನುಷ್ಯರ ವಾಸ್ತವ್ಯದ ಸ್ಥಳವಾಗಿವೆ. ಕೆಲವು ನಿರ್ಲಕ್ಷ್ಯದಿಂದ ಹಾಳಾಗಿವೆ. ನಮ್ಮ ವಿನಂತಿ ಮೇರೆಗೆ ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ ಅವರು ಲಕ್ಕುಂಡಿಯ ಎಂಟು ಜೈನ ಬಸದಿಗಳನ್ನು ಪುನರ್‌ನಿರ್ಮಾಣ ಮಾಡಿದ್ದಾರೆ. ಇನ್ನೂ ಹಾಗೇ ಉಳಿದಿರುವ ಇತರೆ ಬಸದಿ, ವಿಹಾರಗಳನ್ನು ಪುನರ್‌ನಿರ್ಮಾಣ ಮಾಡಲು ಇಲ್ಲಿ ಉಪಸ್ಥಿತರಿರುವ ಜೈನ ಆಚಾರ್ಯರು ಮತ್ತು ಜೈನ ಸಮಾಜದ ದಾನಿಗಳು ಮುಂದೆ ಬರಬೇಕು ಎಂದು ಪಾಟೀಲರು ಮನವಿ ಮಾಡಿದರು.
ಗಾಂಧೀಜಿ ಮೊದಲು ಬರೀ ಮೋಹನದಾಸರಾಗಿದ್ದರು. ಜೈನ ಗುರು ರಾಜಚಂದ್ರರ ಉಪದೇಶಗಳಿಂದ ಪ್ರೇರಣೆ ಪಡೆದು ತಮ್ಮ ಉಪವಾಸ, ಹೋರಾಟಗಳಿಂದ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟ ನಂತರ ಮಹಾತ್ಮ ಎನಿಸಿದರು ಎಂದು ನೆನಪಿಸಿದ ಪಾಟೀಲರು, ಜೈನರ ವ್ರತ, ತಪಸ್ಸು ಮತ್ತು ಜೀವನ ಶೈಲಿಗಳನ್ನು ಉಳಿದವರೂ ನೋಡಿ ಕಲಿಯುವುದು ಬಹಳಷ್ಟಿದೆ ಎಂದರು.
ಕಠಿಣ ತಪಸ್ಸು ಕೈಗೊಳ್ಳುವ ಜೈನ ಮುನಿಗಳ ಸಮೀಪಕ್ಕೆ ಕೂಡ ಇತರೆ ಧರ್ಮಗಳ ಸ್ವಾಮೀಜಿಗಳು, ಗುರುಗಳು ಹೋಗಲು ಸಾಧ್ಯವಿಲ್ಲ ಎಂದರು. ಇಂಥ ಮಹಾಮುನಿಗಳೆಲ್ಲ ಇಲ್ಲಿಗೆ ಆಗಮಿಸಿ ನಮ್ಮನ್ನೆಲ್ಲ ಸನ್ಮಾರ್ಗದತ್ತ ನಡೆಯಲು ಪ್ರೇರಣೆ ನೀಡಿದ್ದಕ್ಕಾಗಿ ತಾವು ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.
ತಾವು ಕ್ರಾಂತಿಪುರುಷ ಗುಣಧರ ನಂದಿ ಮಹಾರಾಜರು ಸುತ್ತಲಿನ ಹಳ್ಳಿಗಳ ಬಡಜನರ ಮಕ್ಕಳನ್ನು ಗುರುತಿಸಿ ಅವರಿಗೆ ಉಚಿತವಾಗಿ ನರ್ಸರಿಯಿಂದ ಪದವಿ ವರೆಗಿನ ಶಿಕ್ಷಣ ನೀಡುತ್ತಿದ್ದಾರೆ. ಇಂಥ ಕಾರ್ಯಕ್ಕಾಗಿ ನಾವು ನೀವೆಲ್ಲ ಆಚಾರ್ಯ ನಂದಿ ಅವರ ಕೆಲಸಕ್ಕೆ ಪ್ರೋತ್ಸಾಹ, ಬೆಂಬಲ ನೀಡಬೇಕಾಗಿದೆ ಎಂದರು.
ಮಾಜಿ ಸಚಿವ ವೀರಕುಮಾರ ಪಾಟೀಲ, ಸುರೇಂದ್ರ ಹೆಗ್ಗಡೆ, ಪ್ರಚಾರ ಸಮಿತಿ ಅಧ್ಯಕ್ಷ ವಿಮಲ ತಾಳಿಕೋಟಿ, ನಾವಳ್ಳಿ, ರಾಜೇಂದ್ರ ಬೀಳಗಿ, ಸುಭಾಸಸಿಂಗ್ ಜಮಾದಾರ, ತೋಟಪ್ಪ ನಿಡಗುಂದಿ, ವಿದ್ಯಾಧರ ಪಾಟೀಲ, ಬ್ರಹ್ಮಕುಮಾರ ಬೀಳಗಿ, ಲೋಬೋಗೋಳ, ಅಶೋಕ ಬಾಗಮಾರ, ಮನೋಜ ಬಾಫಣಾ, ಉತ್ತಮ ಪಾಟೀಲ ಮೊದಲಾದವರು ಉಪಸ್ಥಿತರಿದ್ದರು.