ವರದಕ್ಷಿಣೆ ಕಿರುಕುಳ: ಗೃಹಿಣಿ ಆತ್ಮಹತ್ಯೆ

0
16

ಬಾದಾಮಿ: ತಾಲೂಕಿನ ಚೊಳಚಗುಡ್ಡ ಗ್ರಾಮದಲ್ಲಿ ವಾತ್ಸಲ್ಯ ಪ್ರವೀಣ ಗಂಗಾಲ(೨೮) ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಇದಕ್ಕೆ ವರದಕ್ಷಿಣೆ ಕಿರುಕುಳವೇ ಕಾರಣವೆನ್ನಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪತಿ ಸೇರಿದಂತೆ ಕುಟುಂಬದ ಒಟ್ಟು ೭ ಜನರ ಮೇಲೆ ಪ್ರಕರಣ ದಾಖಲಾಗಿದೆ.
ಮೃತಳ ಸಹೋದರಿ ಛಾಯಾ ಪ್ರಕಾಶ ಕೊತಬಾಳ ನೀಡಿದ ದೂರಿನನ್ವಯ ಮೃತಳ ಪತಿ ಪ್ರವೀಣ ಗಂಗಾಲ, ಮೃತಳ ಅತ್ತೆ, ಮಾವ ಮತ್ತು ನಾದಿನಿಯರು ಸೇರಿ ಒಟ್ಟು ೭ ಜನರ ಮೇಲೆ ಈ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ವಿಠ್ಠಲ ನಾಯಕ ಪ್ರಕರಣ ದಾಖಲಿಸಿಕೊಂಡಿದ್ದು, ಡಿವೈಎಸ್ಪಿ ವಿಶ್ವನಾಥರಾವ್ ಕುಲಕರ್ಣಿ ತನಿಖೆ ಕೈಗೊಂಡಿದ್ದಾರೆ.
ಹಿನ್ನೆಲೆ: ಮೃತ ಯುವತಿ ವಾತ್ಸಲ್ಯ ಗದಗ ಜಿಲ್ಲೆಯ ರೋಣ ತಾಲೂಕಿನ ಗಜೇಂದ್ರಗಡ ಪಟ್ಟಣದ ನಿವಾಸಿ. ೧೧ ತಿಂಗಳ ಹಿಂದೆ ಚೊಳಚಗುಡ್ಡ ಗ್ರಾಮದ ಪ್ರವೀಣ ಅಂದಪ್ಪ ಗಂಗಾಲ ಎಂಬುವವರನ್ನು ವಿವಾಹವಾಗಿದ್ದರು.
ನಂತರ ಯುವತಿಗೆ ನಿತ್ಯ ಮಾನಸಿಕ ಮತ್ತು ದೈಹಿಕವಾಗಿ ಚಿತ್ರಹಿಂಸೆ ನೀಡಲಾಗುತ್ತಿತ್ತು, ಇದರಿಂದ ಬೇಸತ್ತು ಹೋಗಿದ್ದ ವಾತ್ಸಲ್ಯ ತಮ್ಮ ಕುಟುಂಬ ವರ್ಗದವರಿಗೆ ಮತ್ತು ಗ್ರಾಮದ ಪ್ರಮುಖರ ಬಳಿ ತನ್ನ ಅಳಲನ್ನು ತೋಡಿಕೊಂಡಿದ್ದಳಂತೆ.
ಹಿರಿಯರ ಮಧ್ಯಸ್ಥಿಕೆಯಲ್ಲಿ ಸಂಧಾನ ಮಾತುಕತೆ ನಡೆಸಿ ಮತ್ತೆ ಅಂದರೆ ಕಳೆದ ಸೋಮವಾರ ತವರು ಮನೆಯಿಂದ ಆಕೆಯನ್ನು ಕರೆದುಕೊಂಡು ಬರಲಾಗಿತ್ತು. ಬುಧವಾರ ಅವಳಿಗೆ ರಕ್ತ ಬರುವಂತೆ ಹಿಂಸೆ ಕೊಟ್ಟು ಕೊಲೆ ಮಾಡಿ ನೇಣಿಗೆ ಹಾಕಿ ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಿಸಿದ್ದಾರೆ ಎಂದು ಮೃತಳ ಸಹೋದರಿ ಛಾಯಾ ಕೊತಬಾಳ ಪತ್ರಕರ್ತರ ಎದುರಿಗೆ ನೋವನ್ನು ತೋಡಿಕೊಂಡರು.

Previous articleದರೋಡೆ ಪ್ರಕರಣ: ಕಾಲಿಗೆ ಗುಂಡೇಟು ತಿಂದ ಆರೋಪಿ ವಿರುದ್ಧ 54 ಪ್ರಕರಣ
Next articleನ್ಯಾಯಾಲಯಕ್ಕೆ ನಕ್ಸಲ್ ನಾಯಕ ಬಿ.ಜಿ. ಕೃಷ್ಣಮೂರ್ತಿ ಹಾಜರು