ದಾವಣಗೆರೆ: ವಕ್ಫ್ ಮಂಡಳಿ ಹೆಸರಿನಲ್ಲಿ ರಾಜ್ಯದ ರೈತರು, ಜನ ಸಾಮಾನ್ಯರು, ಮಠ ಮಂದಿರಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸರ್ಕಾರ ದ್ರೋಹ ಬಗೆದಿದೆ ಎಂದು ಚಿತ್ರದುರ್ಗ ಸಂಸದ ಗೋವಿಂದ ಕಾರಜೋಳ ಆರೋಪಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನೂರಾರು ವರ್ಷಗಳಿಂದಲೂ ರೈತರ ಹೆಸರಿನಲ್ಲಿ ಪಹಣಿ ಇದ್ದ ಜಮೀನು, ಜಾಗಗಳನ್ನು ವಕ್ಫ್ ಆಸ್ತಿ ಮಾಡಲು ಸಿದ್ದರಾಮಯ್ಯ ಸರ್ಕಾರ ಮುಂದಾಗಿದೆ. ಇದು ನಾಡಿನ ರೈತರು, ಜನ ಸಾಮಾನ್ಯರು, ಮಠ ಮಂದಿರಗಳಿಗೆ ಸಿದ್ದರಾಮಯ್ಯ ಸರ್ಕಾರ ಮಾಡುತ್ತಿರುವ ಘೋರ ದ್ರೋಹವಾಗಿದೆ ಎಂದರು.
ರೈತರಿಗೆ ನೋಟೀಸ್ ಸಹ ಕೊಡದೇ, ವಕ್ಫ್ ಆಸ್ತಿಯೆಂದು ಸೇರಿಸಿದ್ದಾರೆ. ವಕ್ಫ್ ಪ್ರಾಪರ್ಟಿ ಅಂತಾ ಹೇಳಿದರೆ, ಅದಕ್ಕೆ ನೋಟೀಸ್ ಕೊಡಿ ಎಂಬುದಾಗಿ ಸ್ವತಃ ಸಿದ್ದರಾಮಯ್ಯ ಹೇಳಿದ್ದಾರೆ. ಮಠಮಾನ್ಯಗಳು, ದೇವಸ್ಥಾನಗಳನ್ನೂ ವಕ್ಫ್ ಪ್ರಾಪರ್ಟಿ ಎನ್ನುತ್ತಿದ್ದಾರೆ. ಸಿಂಧಗಿಯ ಬಸವ ತತ್ವ ಮಠವೂ ವಕ್ಫ್ ಆಸ್ತಿ ಎನ್ನಲಾಗಿದೆ ಎಂದು ಅವರು ಆಕ್ರೋಶ ಹೊರಹಾಕಿದರು.