ದಾವಣಗೆರೆ: ರಜೆ ಹಾಕದೆ ಕರ್ತವ್ಯಕ್ಕೆ ಗೈರಾಗಿದ್ದರಿಂದ ಅಮಾನತುಗೊಂಡಿದ್ದ ಗ್ರಂಥಾಲಯ ಮೇಲ್ವಿಚಾರಕನ ಕರ್ತವ್ಯಕ್ಕೆ ನಿಯೋಜನೆಗೆ ಲಂಚ ಪಡೆಯುತ್ತಿದ್ದ ಚನ್ನಗಿರಿ ತಾಪಂ ಇಒ ಜೀಪ್ ಚಾಲಕನನ್ನು ಲೋಕಾಯುಕ್ತ ಪೊಲೀಸರು ಸೋಮವಾರ ಬಂಧಿಸಿದ್ದಾರೆ.
ಚನ್ನಗಿರಿ ತಾಲೂಕು ಪಂಚಾಯತ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಜೀಪ್ ಚಾಲಕ ಶ್ಯಾಮ್‌ಕುಮಾರ್ ಬಂಧಿತ. ಚನ್ನಗಿರಿ ತಾಲೂಕಿನ ಬೆಳ್ಳಿಗನೂಡು ಗ್ರಾಪಂ ಗ್ರಂಥಾಲಯದ ಮೇಲ್ವಿಚಾರಕ ಷಫಿವುಲ್ಲಾ ಫೆ. ೧೫ ಮತ್ತು ೧೬ರಂದು ರಜೆ ಹಾಕದೆ ಕರ್ತವ್ಯಕ್ಕೆ ಗೈರಾಗಿದ್ದರು. ಈ ಬಗ್ಗೆ ತಾಪಂ ಇಒ ಅಮಾನತುಗೊಳಿಸಿದ್ದರು.
ಅಮಾನತಿನಿಂದ ಬಿಡುಗಡೆಗೊಳಿಸಿ ಕರ್ತವ್ಯಕ್ಕೆ ಮರು ನಿಯೋಜನೆಗೆ ಶ್ಯಾಂಕುಮಾರ್ ಷಫಿವುಲ್ಲಾ ಅವರಿಂದ 50 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಷಫಿವುಲ್ಲಾ ಲೋಕಾಯುಕ್ತರಿಗೆ ದೂರು ಸಲ್ಲಿಸಿದ್ದರು. ಲೋಕಾಯುಕ್ತ ಪೊಲೀಸರ ಸಲಹೆಯಂತೆ ಸೋಮವಾರ ಸಂಜೆ ಶ್ಯಾಮ್‌ಕುಮಾರ್ ೪೦ ಸಾವಿರ ರೂ. ಲಂಚ ಪಡೆಯುತ್ತಿದ್ದಾಗ ದಾಳಿ ನಡೆಸಿ ಬಂಧಿಸಿದ್ದಾರೆ.