ಧಾರವಾಡ: ಕೆಲಗೇರಿ ರಸ್ತೆಯ ಸಂಪಿಗೆ ನಗರದಲ್ಲಿ ಅಟೋ ಹಾಗೂ ಲಾರಿ ಮಧ್ಯೆ ಭೀಕರ ಅಪಘಾತ ಸಂಭವಿಸಿ ಮೂವರು ಮೃತಪಟ್ಟ ಘಟನೆ ಭಾನುವಾರ ಬೆಳಗ್ಗೆ ಸಂಭವಿಸಿದೆ.
ಆಟೋ ಚಾಲಕ ರಮೇಶ ಹಂಚಿನಮನಿ(೩೫) ಹಾಗೂ ಮರೆವ್ವ ಹಂಚಿನಮನಿ(೫೫) ಸ್ಥಳದಲ್ಲಿಯೇ ಮೃತಪಟ್ಟರೆ ೬ ವರ್ಷದ ಮಗು ಕಿಮ್ಸ್‌ನಲ್ಲಿ ಚಿಕಿತ್ಸೆ ಫಲಿಸದೇ ಮೃತಪಟ್ಟಿದೆ.
ಗಂಭೀರವಾಗಿ ಗಾಯಗೊಂಡ ಪ್ರಣವ್, ಪೃಥ್ವಿ ಹಾಗೂ ರೇಣುಕಾ ಅವರನ್ನು ಕಿಮ್ಸ್‌ಗೆ ದಾಖಲಿಸಲಾಗಿತ್ತು, ಸಂಚಾರಿ ಪೊಲೀಸ್ ಠಾಣೆಯ ಸಿಪಿಐ ಶ್ರೀನಿವಾಸ ಮೇಟಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಲಾರಿ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರತಿಭಟನೆ: ಅಪಘಾತ ಸಂಭವಿಸುತ್ತಿದ್ದಂತೆಯೇ ಗ್ರಾಮಸ್ಥರು ರಸ್ತೆಯಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿದರು. ಕೆಲಗೇರಿ ರಸ್ತೆಯಲ್ಲಿ ಅತಿಯಾದ ವೇಗದಿಂದ ಲಾರಿ ಹಾಗೂ ಬಸ್‌ಗಳು ಸಂಚರಿಸುತ್ತಿರುವುದರಿಂದ ಅಪಘಾತಗಳು ಸಂಭವಿಸುತ್ತಿದ್ದು, ಕೂಡಲೇ ರಸ್ತೆಯಲ್ಲಿ ಲಾರಿ ಹಾಗೂ ಬಸ್ ಸೇರಿದಂತೆ ಭಾರಿ ವಾಹನಗಳ ಸಂಚಾರ ನಿಷೇಧಿಸಬೇಕೆಂದು ಆಗ್ರಹಿಸಿದರು.