ಲಕ್ಷದ್ವೀಪದಲ್ಲಿ ಹೂಡಿಕೆಯ ಮದ್ದು ಮಾಲ್ಡೀವ್ಸ್‌ಗೆ ಗುದ್ದು

0
6

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಲಕ್ಷದ್ವೀಪಕ್ಕೆ ತೆರಳಿ, ಅಲ್ಲಿನ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಬೇಕು ಎಂದಿದ್ದಕ್ಕೇ ತಗಾದೆ ತೆಗೆದಿದ್ದ ಮಾಲ್ಡೀವ್ಸ್‌ಗೆ ಈಗ ಬಜೆಟ್‌ನಲ್ಲಿ ಭಾರತ ತಿರುಗೇಟು ನೀಡಿದೆ. “ಲಕ್ಷದ್ವೀಪ ಸೇರಿ ದೇಶದ ಎಲ್ಲೆಡೆ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲಾಗುವುದು. ಲಕ್ಷದ್ವೀಪದಲ್ಲಿ ಭಾರಿ ಪ್ರಮಾಣದ ಹೂಡಿಕೆಯಾಗಲಿದೆ” ಎಂದು ಬಜೆಟ್ ಭಾಷಣದ ವೇಳೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಪ್ರಸ್ತಾಪಿಸಿದರು.
“ದೇಶದ ಪ್ರವಾಸೋದ್ಯಮಕ್ಕೆ ಕೇಂದ್ರ ಸರ್ಕಾರ ಹೆಚ್ಚಿನ ಆದ್ಯತೆ ನೀಡುತ್ತಿದೆ. ಬಂದರು ಸಂಪರ್ಕ, ಪ್ರವಾಸೋದ್ಯಮ ಮೂಲ ಸೌಕರ್ಯಗಳ ಅಭಿವೃದ್ಧಿ, ಲಕ್ಷದ್ವೀಪ ಸೇರಿ ದೇಶದ ಎಲ್ಲ ದ್ವೀಪಗಳನ್ನು ಅಭಿವೃದ್ಧಿಗೊಳಿಸಲಾಗುವುದು” ಎಂದು ನಿರ್ಮಲಾ ಸೀತಾರಾಮನ್ ಹೇಳಿದರು. ಭಾರತದ ಆಂತರಿಕ ವಿಚಾರದಲ್ಲಿ ಸುಖಾಸುಮ್ಮನೆ ಮೂಗು ತೂರಿಸಿದ್ದ ಮಾಲ್ಡೀವ್ಸ್ಗೆ ಇದರಿಂದ ಭಾರಿ ಹಿನ್ನಡೆಯಾಗಲಿದೆ. ಈಗಾಗಲೇ ಭಾರತದಲ್ಲಿ ಬಾಯ್ಕಾಟ್ ಮಾಲ್ಡೀವ್ಸ್ ಅಭಿಯಾನ ಆರಂಭವಾದ ಬಳಿಕ ಮಾಲ್ಡೀವ್ಸ್ಗೆ ಭೇಟಿ ನೀಡುವ ಭಾರತೀಯರ ಸಂಖ್ಯೆ ಗಣನೀಯವಾಗಿ ಕುಸಿದಿದೆ. ಇದರಿಂದಾಗಿ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಕೊಡುಗೆ ನೀಡುವ ಅಗ್ರ ರಾಷ್ಟçಗಳಲ್ಲಿ ಭಾರತವು ಅಗ್ರ ಸ್ಥಾನದಿಂದ ೫ನೇ ಸ್ಥಾನಕ್ಕೆ ಕುಸಿದಿದೆ. ಇದರಿಂದ ಮಾಲ್ಡೀವ್ಸ್ ಪ್ರವಾಸೋದ್ಯಮಕ್ಕೆ ಭಾರಿ ಪೆಟ್ಟು ಬಿದ್ದಿದೆ ಎಂದೇ ಹೇಳಲಾಗುತ್ತಿದೆ.
ಮಾಲ್ಡೀವ್ಸ್ ಪ್ರವಾಸೋದ್ಯಮ ಸಚಿವಾಲಯ ನೀಡಿದ ಮಾಹಿತಿ ಪ್ರಕಾರ, ೨೦೨೩ರಲ್ಲಿ ಭಾರತೀಯರೇ ಹೆಚ್ಚಿನ ಸಂಖ್ಯೆಯಲ್ಲಿ ಮಾಲ್ಡೀವ್ಸ್ಗೆ ತೆರಳಿದ್ದಾರೆ. ೨೦೨೩ರಲ್ಲಿ ಭಾರತದಿಂದ ಮಾಲ್ಡೀವ್ಸ್ಗೆ ೨,೦೯,೧೯೮ ಜನ ಭೇಟಿ ನೀಡಿದರೆ, ರಷ್ಯಾದಿಂದ ೨,೦೯,೧೪೬ ಪ್ರವಾಸಿಗರು ಭೇಟಿ ನೀಡಿದ್ದಾರೆ. ಇನ್ನು, ಚೀನಾದಿಂದ ಕಳೆದ ವರ್ಷ ೧,೮೭,೧೧೮ ಮಂದಿ ಮಾಲ್ಡೀವ್ಸ್ಗೆ ಭೇಟಿ ನೀಡಿದ್ದಾರೆ.

Previous article೨೦೨೪ನೇ ಮಧ್ಯಂತರ ಬಜೆಟ್‌ನ ಪ್ರಮುಖಾಂಶಗಳು‌
Next articleಮುಂಬೈನ ಆರು ಸ್ಥಳಗಳಲ್ಲಿ ಬಾಂಬ್‌: ಪೊಲೀಸರ ತೀವ್ರ ಕಟ್ಟೆಚ್ಚರ, ತಪಾಸಣೆ