ರ‍್ಯಾಪಿಡೋ ಬೈಕ್ ಚಾಲಕನಿಂದ ಹಲ್ಲೆ: ಹೊಡೆತಕ್ಕೆ ನೆಲಕ್ಕುರುಳಿದ ಯುವತಿ

ಬೆಂಗಳೂರು: ರ‍್ಯಾಪಿಡೋ ಬೈಕ್ ಟ್ಯಾಕ್ಸಿ ಚಾಲಕನ ಅತಿವೇಗದ ಚಾಲನೆ ಪ್ರಶ್ನಿಸಿದ್ದಕ್ಕೆ ಯುವತಿ ಮೇಲೆ ಚಾಲಕ ಹಲ್ಲೆ ನಡೆಸಿದ್ದು, ಹೊಡೆದ ಏಟಿಗೆ ಯುವತಿ ರಸ್ತೆಗೆ ಬಿದ್ದಿದ್ದಾಳೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಬೆಂಗಳೂರಿನ ಜಯನಗರದಲ್ಲಿ ಜೂನ್ 14ರಂದು ಈ ಘಟನೆ ನಡೆದಿದ್ದು, ಬೈಕ್ ಟ್ಯಾಕ್ಸಿ ಚಾಲಕ ಸುಹಾಸ್ ಎನ್ನುವಾತ ಶ್ರೇಯಾ ಎನ್ನುವ ಯುವತಿ ಮೇಲೆ ಹಲ್ಲೆ ಮಾಡಿದ್ದಾನೆ.
ಶ್ರೇಯಾ ಎನ್ನುವವರು ರ‍್ಯಾಪಿಡೋ ಸೇವೆ ಬಳಸಿಕೊಂಡು ಪ್ರಯಾಣಿಸುತ್ತಿದ್ದರು. ಈ ವೇಳೆ ಚಾಲಕನು ಅತಿ ವೇಗವಾಗಿ ವಾಹನ ಚಲಾಯಿಸುತ್ತಿದ್ದುದರಿಂದ, ಶ್ರೇಯಾ ಚಾಲಕನನ್ನು ಪ್ರಶ್ನಿಸಿದ್ದಾರೆ. ಇದೇ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ನಡೆದಿದ್ದು, ಮಾತಿಗೆ ಮಾತು ಬೆಳೆದಿದೆ. ಈ ವೇಳೆ ಚಾಲಕ ಸುಹಾಸ್ ಯುವತಿಗೆ ರಪ್ ಅಂತ ಬಾರಿಸಿದ್ದಾನೆ. ಹೊಡೆದ ಏಟಿಗೆ ಯುವತಿ ರಸ್ತೆಗೆ ಬಿದ್ದಿದ್ದಾಳೆ.
ಈ ಘಟನೆಗೆ ಸ್ಪಷ್ಟನೆ ನೀಡಿರುವ ಬೈಕ್‌ ಚಾಲಕ, ಮೊದಲು ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದು ಆ ಯುವತಿ. ಅರ್ಧ ದಾರಿಯಲ್ಲಿ ನಿಲ್ಲಿಸಿ ಇಂಗ್ಲಿಷ್‌ನಲ್ಲಿ ನನಗೆ ಕೆಟ್ಟದಾಗಿ ಬೈದರು. ಟಿಫಿನ್ ಬಾಕ್ಸ್‌ನಿಂದ ಹೊಡೆದ್ರು. ಅಷ್ಟು ಜನರ ಮುಂದೆ ಹೊಡೆದಾಗ ಸಿಟ್ಟಲ್ಲಿ‌ ನಾನು ಹೊಡೆದೆ ಎಂದು ಹೇಳಿದ್ದಾನೆ. ವಿಡಿಯೋ ವೈರಲ್ ಆದ ಮೇಲೆ ಪೊಲೀಸರು ಕರೆ ಮಾಡಿದ್ದಾರೆ. ತನಿಖೆಗೆ ಸಹಕಾರ ನೀಡುತ್ತೇನೆ ಎಂದು ಹೇಳಿದ್ದಾನೆ.