ದಾವಣಗೆರೆ: ಹಳೆಯ ದ್ವೇಷದ ಹಿನ್ನೆಲೆಯಲ್ಲಿ ರೌಡಿಶೀಟರ್‌ನೊಬ್ಬನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಹದಡಿ ರಸ್ತೆಯ ಸೋಮೇಶ್ವರ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ಮುಂಭಾಗದಲ್ಲಿ ಸೋಮವಾರ ಸಂಜೆ ನಡೆದಿದೆ.
ಕೆಟಿಜೆ ನಗರದ ನಿವಾಸಿ ಸಂತೋಷ್ ಆಲಿಯಾಸ್ ಕಣುಮಾ ಭೀಕರವಾಗಿ ಹತ್ಯೆಯಾಗಿರುವ ರೌಡಿಶೀಟರ್. ಊಟ ಮುಗಿಸಿಕೊಂಡು ಇಲ್ಲಿಗೆ ಬಂದಿದ್ದಾಗ ಆಟೋದಲ್ಲಿ ಬಂದ 7ರಿಂದ 8 ಎಂಟು ಜನ ದುಷ್ಕರ್ಮಿಗಳು ಮಚ್ಚಿನಿಂದ ಕೊಚ್ಚಿ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾರೆ ಎಂದು ಹೇಳಲಾಗಿದೆ. ರೌಡಿಶೀಟರ್, ಎಸ್ಟೇಟ್ ಸೇರಿದಂತೆ ಹಲವು ಕ್ರಿಮಿನಲ್ ಅಪರಾಧಗಳು ಕಣುಮಾ ಆಲಿಯಾಸ್ ಸಂತೋಷ್ ಮೇಲಿದ್ದವು. ರೌಡಿಶೀಟರ್ ಬುಳ್‌ನಾಗನ ಹತ್ಯೆಯಲ್ಲಿ ಸಂತೋಷ್ ಆಲಿಯಾಸ್ ಕಣುಮಾನ ಹೆಸರು ಪ್ರಮುಖವಾಗಿ ಕೇಳಿ ಬಂದಿತ್ತು. ಬುಳ್‌ನಾಗನ ಕಡೆಯವರು ಕಣುಮಾನ ಮೇಲೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದ್ದರು. ರೌಡಿ ಕಾಗೆ ರಾಜಾ ಮತ್ತು ಚಟ್ನಿ ಅಜ್ಜಯ ಜೋಡಿ ಕೊಲೆಗೆ ಪ್ರತಿಯಾಗಿ ಬುಳ್ ನಾಗನನ್ನು ಹತ್ಯೆ ಮಾಡಿದ್ದ ಆರೋಪದಲ್ಲಿ ಸಂತೋಷ್ ಆಲಿಯಾಸ್ ಕಣುಮಾ ಬಂಧನಕ್ಕೊಳಗಾಗಿದ್ದ. ರಿಯಲ್ ಎಸ್ಟೇಟ್, ನಿಧಿಯಲ್ಲಿ ಸಿಕ್ಕ ಬಂಗಾರ ನೀಡುವುದಾಗಿ ವಂಚನೆ ಮಾಡಿದ ಆರೋಪವೂ ಕಣುಮಾ ಮೇಲಿದ್ದವು. ಈ ಹಿನ್ನೆಲೆಯಲ್ಲಿ ಹತ್ಯೆ ನಡೆದಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.
ಎಸ್ಪಿ ಉಮಾ ಪ್ರಶಾಂತ್, ಹೆಚ್ಚುವರಿ ಎಸ್ಪಿ ವಿಜಯಕುಮಾರ್ ಸಂತೋಷ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಘಟನೆ ಕುರಿತು ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದುಷ್ಕರ್ಮಿಗಳ ಬಂಧನಕ್ಕೆ ತಂಡ ರಚನೆ:
ರೌಡಿಶೀಟರ್ ಹತ್ಯೆ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಎಸ್ಪಿ ಉಮಾ ಪ್ರಶಾಂತ್, ರೌಡಿಶೀಟರ್ ಸಂತೋಷ್ ಆಲಿಯಾಸ್ ಕಣುಮಾ ಅವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಇವರ ಮೇಲೆ ಸಾಕಷ್ಟು ಅಪರಾಧ, ಹಲ್ಲೆ ಹಾಗೂ ಕೊಲೆ ಪ್ರಕರಣಗಳು ದಾಖಲಾಗಿದ್ದವು. ಹಳೆಯ ವೈಷಮ್ಯದಿಂದ ಈ ಘಟನೆ ನಡೆದಿರಬಹುದು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಈಗಾಗಲೇ ನಾವು ಡಿವೈಎಸ್ಪಿ ನೇತೃತ್ವದಲ್ಲಿ ತಂಡ ರಚಿಸಲಾಗಿದೆ. ಈ ಘಟನೆಯಲ್ಲಿ ಯಾರು ಭಾಗಿಯಾಗಿದ್ದಾರೆ ಅವರ ಪತ್ತೆಗೆ ಪೊಲೀಸ್ ತಂಡ ಕಾರ್ಯೋನ್ಮುಖವಾಗಿದೆ ಎಂದು ತಿಳಿಸಿದರು.