ದಾವಣಗೆರೆ: ಬರ್ಬರವಾಗಿ ಹತ್ಯೆಗೀಡಾಗಿದ್ದ ರೌಡಿಶೀಟರ್ ಸಂತೋಷ್ ಕುಮಾರ್ ಆಲಿಯಾಸ್ ಕಣುಮಾ ಕೊಲೆ ಪ್ರಕರಣ ಸಂಬಂಧಿಸಿದಂತೆ ಮೃತನ ಪತ್ನಿ ಟಿ.ಕೆ. ಶೃತಿ ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ 12 ಜನರ ವಿರುದ್ಧ ದೂರು ನೀಡಿದ್ದಾರೆ.
ಮಂಗಳವಾರ ಸಂಜೆ(ಮೇ 5) 5 ಗಂಟೆ ಸುಮಾರಿನಲ್ಲಿ ರೌಡಿಶೀಟರ್ ಸಂತೋಷ್ ಕುಮಾರ್ ಆಲಿಯಾಸ್ ಕಣುಮಾ ನಗರದ ಹದಡಿ ರಸ್ತೆಯಲ್ಲಿ ಮಾರಕಾಸ್ತ್ರಗಳಿಂದ ಹತ್ಯೆಗೀಡಾದ್ದ. ಮೃತನ ಪತ್ನಿ ಟಿ.ಕೆ. ಶೃತಿ, ಮೇ 5ರ ಸಂಜೆ ನನ್ನ ಸಂಬಂಧಿ ಮಂಜುನಾಥ್ ಎಂಬುವರು ನನಗೆ ಮೊಬೈಲ್ ಕರೆ ಮಾಡಿ ನನ್ನ ಪತಿ ಸಂತೋಷ್‌ಕುಮಾರನನ್ನು ಹದಡಿ ರಸ್ತೆಯಲ್ಲಿನ ಸೋಮೇಶ್ವರ ಆಸ್ಪತ್ರೆಯ ಎದುರಿನ ಕಟ್ಟಡದಲ್ಲಿ ಯಾರೋ ದುಷ್ಕರ್ಮಿಗಳು ಯಾವುದೋ ಉದ್ದೇಶದಿಂದ ಮಾರಕಾಸ್ತ್ರಗಳಿಂದ ಕೊಲೆ ಮಾಡಿರುವುದಾಗಿ ತಿಳಿಸಿದರು. ತಕ್ಷಣವೇ ನಾನು ಹಾಗೂ ನನ್ನ ಮಗ ಚಿರಾಗ್ ಎಸ್. ಕವಾಡಿ ಸ್ಥಳಕ್ಕೆ ಹೋಗಿ ನೋಡಿದರೆ, ರಕ್ತದ ಮಡುವಿನಲ್ಲಿ ನನ್ನ ಗಂಡ ಕೊಲೆಯಾಗಿದ್ದರು.
ನನ್ನ ಗಂಡನನ್ನು ಯಾವುದೋ ದುರುದ್ದೇಶದಿಂದ ದುಷ್ಕರ್ಮಿಗಳು ಕೊಲೆ ಮಾಡಿದ್ದು ಗುಂಡಪ್ಪ ತಂದೆ ಮಂಜಪ್ಪ, ಕಾರ್ತಿಕ್ ಭಾರತ್ ಕಾಲೋನಿ, ನವೀನ್ ಬೂದಾಳ್ ರಸ್ತೆ, ನವೀನ್ ತಂದೆ ಮಲ್ಲೇಶಪ್ಪ (ಖಾರದ ಪುಡಿ ಮಂಜನ ತಮ್ಮ), ಚಾವಳಿ ಸಂತು, ಬಸವರಾಜ @ ಬಸ್ಯ, ಹನುಮಂತ ಗಡ್ಡ ವಿಜಿ, ಚಿಕ್ಕನಹಳ್ಳಿ ಶಿವು, ಕಡ್ಡಿ ರಘು, ಪ್ರಶಾಂತ್ @ ಪಚ್ಚಿ, 60 ಅಡಿ ರೋಡ್ ಗಣಿ ಮತ್ತು ಇತರರು ಸೇರಿ ಕೊಲೆ ಮಾಡಿರುವುದಾಗಿ ತಿಳಿದು ಬಂದಿದ್ದು, ಅವರ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡಬೇಕಾಗಿ ದೂರಿನಲ್ಲಿ ಕೋರಿದ್ದಾರೆ. ಪ್ರಕರಣ ದಾಖಲು ಮಾಡಿಕೊಂಡಿರುವ ವಿದ್ಯಾನಗರ ಠಾಣೆಯ ಪೊಲೀಸರು ತನಿಖೆ ಕೈಗೊಂಡಿದ್ದಾರೆ.