ರೈಲು ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆ

0
28

ಹುಬ್ಬಳ್ಳಿ: ಭಾರತ-ಪಾಕ್ ಯುದ್ಧ ಸನ್ನಿಹಿತ ಪರಿಸ್ಥಿತಿ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ದೇಶವ್ಯಾಪಿ ಆಯಕಟ್ಟಿನ ಸ್ಥಳ, ಜನನಿಭೀಡ ಪ್ರದೇಶಗಳಲ್ಲಿ ಬಿಗಿ ಭದ್ರತೆ, ತಪಾಸಣೆ ಹೆಚ್ಚಿಸಲಾಗಿದ್ದು, ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದ ವ್ಯಾಪ್ತಿಯ ರೈಲ್ವೆ ನಿಲ್ದಾಣಗಳಲ್ಲಿ ಭದ್ರತಾ ತಪಾಸಣೆ, ಪಥ ಸಂಚಲನ ನಡೆಸಲಾಯಿತು.
ರೈಲ್ವೆ ಪ್ರದೇಶದಲ್ಲಿ ಭದ್ರತೆಯ ಆಯೋಜನೆ, ಅಪರಾಧ ಪತ್ತೆ ಮತ್ತು ತುರ್ತು ಪರಿಸ್ಥಿತಿಗಳ ನಿರ್ವಹಣೆ ಕುರಿತು ಹುಬ್ಬಳ್ಳಿ ವಿಭಾಗದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಧ್ವಜ ಪಥಸಂಚಲನ ಮತ್ತು ಭದ್ರತಾ ತಪಾಸಣೆಯನ್ನು ಗುರುವಾರ ನಡೆಸಲಾಯಿತು ಎಂದು ನೈಋತ್ಯ ರೈಲ್ವೆ ವಲಯ ಅಧಿಕಾರಿಗಳು ತಿಳಿಸಿದ್ದಾರೆ.
ಈ ತಪಾಸಣೆಯಲ್ಲಿ ರೈಲ್ವೆ ರಕ್ಷಣಾ ಪಡೆ, ಸರ್ಕಾರಿ ರೈಲ್ವೆ ಪೊಲೀಸ್ ಹಾಗೂ ಡಾಗ್ ಸ್ಕ್ವಾಡ್ ಸಂಯುಕ್ತವಾಗಿ ಭಾಗವಹಿಸಿ ವಿಭಾಗದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಪ್ರಯಾಣಿಕರ ಮತ್ತು ಅವರ ಲಗೇಜಗಳ ತೀವ್ರ ತಪಾಸಣೆ ನಡೆಸಲಾಯಿತು. ಇದಕ್ಕಾಗಿ ಹ್ಯಾಂಡ್ ಹೆಲ್ಡ್ ಮೆಟಲ್ ಡಿಟೆಕ್ಟರ್, ಡೋರ್ ಫ್ರೇಮ್ ಮೆಟಲ್ ಡಿಟೆಕ್ಟರ್ ಮತ್ತು ಲಗೇಜ್ ತಪಾಸಣಾ ಸ್ಕ್ಯಾನರ್‌ಗಳನ್ನು ಬಳಸಲಾಯಿತು. ವಿಶೇಷವಾಗಿ ರೈಲು ನಿಲ್ದಾಣದ ಪ್ರವೇಶ ದ್ವಾರ ಮತ್ತು ನಿರ್ಗಮನ ಕೇಂದ್ರಗಳಲ್ಲಿ ಕಟ್ಟುನಿಟ್ಟಾದ ನಿಗಾವಹಿಸಲಾಯಿತು. ಸಿಸಿಟಿವಿ ವ್ಯಾಪ್ತಿಯನ್ನು ನಿಯಮಿತವಾಗಿ 24/7 ಮೇಲ್ವಿಚಾರಣೆ ಮಾಡಲಾಯಿತು.
ರೈಲ್ವೆ ಸಚಿವಾಲಯದ ನಿರ್ದೇಶನದಡಿ ಈ ಬಗೆಯ ತಪಾಸಣಾ ಕ್ರಮಗಳನ್ನು ಆಯೋಜಿಸಲಾಯಿತು. ದಿಢೀರನೆ ಎದುರಾಗುವ ಕಠಿಣ ತುರ್ತು ಪರಿಸ್ಥಿತಿಯ ನಿರ್ವಹಣೆಗೆ ತಪಾಸಣಾ ಪ್ರಕ್ರಿಯೆ ಸಹಕಾರಿಯಾಗಿದೆ. ಇಂತಹ ಭದ್ರತಾ ಉಪಕ್ರಮಗಳನ್ನು ನಿಯಮಿತವಾಗಿ ಕೈಗೊಳ್ಳಲಾಗುತ್ತವೆ ಎಂದು ಹಿರಿಯ ವಿಭಾಗೀಯ ರೈಲ್ವೆ ಭದ್ರತಾ ಆಯುಕ್ತರಾದ ಅಲೋಕ್ ಕುಮಾರ್ ತಿಳಿಸಿದ್ದಾರೆ.

Previous articleಆಲಮಟ್ಟಿ-ತುಂಗಭದ್ರಾ ಜಲಾಶಯಕ್ಕೆ ಬಿಗಿಭದ್ರತೆ
Next articleದೇಶದಲ್ಲಿ ಆಹಾರ, ಅಗತ್ಯ ವಸ್ತುಗಳಿಗೆ ಕೊರತೆಯಿಲ್ಲ: ವದಂತಿಗೆ ಕಿವಿಗೊಡಬೇಡಿ