ರೈಲು ಡಿಕ್ಕಿ: ಬಳ್ಳಾರಿ ಮೂಲದ ಯುವತಿ ಸಾವು

ದಾವಣಗೆರೆ: ಚಲಿಸುವ ರೈಲು ಡಿಕ್ಕಿ ಹೊಡೆದು ಬಳ್ಳಾರಿ ಮೂಲದ ಯುವತಿಯೊಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಹರಿಹರ ರೈಲ್ವೆ ನಿಲ್ದಾಣದಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಬಳ್ಳಾರಿ ನಗರದ ಶ್ರಾವಣಿ (೨೧) ಮೃತಪಟ್ಟ ಯುವತಿ. ಹರಿಹರದ ಸಂಬಂಧಿಕರ ಮನೆಯಲ್ಲಿ ನಡೆಯುತ್ತಿದ್ದ ಕಾರ್ಯಕ್ರಮವೊಂದಕ್ಕೆ ಬೆಂಗಳೂರಿನಿಂದ ಗೋಲ್‌ಗುಂಬಜ್ (೧೬೫೩೫) ರೈಲಿನಲ್ಲಿ ರಾತ್ರಿ ೧೨.೧೫ ಗಂಟೆ ಸುಮಾರಿನಲ್ಲಿ ಹರಿಹರಕ್ಕೆ ಬಂದು ರೈಲಿನಿಂದ ಇಳಿದಿದ್ದಾರೆ. ಈ ವೇಳೆ ರೈಲ್ವೆ ನಿಲ್ದಾಣಕ್ಕೆ ಬಂದಿದ್ದೇನೆ ಎಂದು ನಿಲ್ದಾಣದ ಫ್ಲಾಟ್ ಫಾರಂನ ತುದಿಯಲ್ಲಿ ನಿಂತು ಸಂಬಂಧಿಕರಿಗೆ ಫೋನ್ ಮಾಡಿದ್ದಾರೆ.
ಫೋನ್‌ನಲ್ಲಿ ಮಾತನಾಡುತ್ತಿದ್ದಾಗ ಎದುರಿಗೆ ವೇಗವಾಗಿ ಬಂದ ವಿಜಯಪುರದಿಂದ ಮಂಗಳೂರಿಗೆ ಹೋಗುವ (೦೭೩೭೭) ರೈಲು ಡಿಕ್ಕಿ ಹೊಡೆದಿದೆ. ಮುಖ ಮತ್ತು ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎಂದು ಹೇಳಲಾಗಿದೆ.
ಮೈಸೂರಿನ ಕಾಲೇಜಿನೊಂದರಲ್ಲಿ ಶ್ರಾವಣಿ ಎಂಬಿಎ ಅಭ್ಯಾಸ ಮಾಡುತ್ತಿದ್ದರು. ಸಂಬಂಧಿಕರ ಮನೆಯಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಂಗಳೂರಿನಿಂದ ಹರಿಹರಕ್ಕೆ ಬಂದಾಗ ಈ ದುರ್ಘಟನೆ ನಡೆದಿದೆ. ಮೃತದೇಹವನ್ನು ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಮೃತದೇಹ ಹಸ್ತಾಂತರ ಮಾಡಲಾಗಿದೆ.
ಘಟನಾ ಸ್ಥಳಕ್ಕೆ ಜಿಆರ್‌ಪಿ ಎಎಸ್‌ಐ ಜಾನ್ ಕೋರಿಯಸ್, ಆರ್‌ಪಿಎಫ್ ಮುಖ್ಯ ಪೇದೆ ಪರಮೇಶ್ವರ ನಾಯಕ್ ಮತ್ತು ಗೋಲ್‌ಗುಂಬಜ್ ರೈಲಿನ ಆರ್‌ಪಿಎಫ್ ಬೆಂಗಾವಲು ಸಿಬ್ಬಂದಿ ಬಿ.ಎಸ್. ಸತೀಶ್ ಮತ್ತು ಸಿಬ್ಬಂದಿ ಪರಿಶೀಲನೆ ನಡೆಸಿದರು. ಈ ಘಟನೆ ಕುರಿತು ದಾವಣಗೆರೆ ಜಿಆರ್‌ಪಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.