ಹುಬ್ಬಳ್ಳಿ: ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಕನ್ನಡಿಗರನ್ನು ಮಂಗನ ಮಾಡಿ ಜನರ ಕೈಗೆ ಚಿಪ್ಪು ಕೊಡಲು ಸಿದ್ಧವಾಗಿದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಕಿಡಿ ಕಾರಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ತಾವು ಘೋಷಿಸಿದ ಬಿಟ್ಟಿ ಭಾಗ್ಯಗಳನ್ನು ಪೂರೈಸಲು ಹರಸಾಹಸ ಪಡುತ್ತಿದೆ. ಹೀಗಿರುವಾಗ ರೈತರ ಸಂಕಷ್ಟಕ್ಕೆ ಸ್ಪಂದಿಸುವಲ್ಲಿ ಬಲಹೀನವಾಗಿಬಿಟ್ಟಿದೆ ಎಂದು ಸಚಿವರು `ಎಕ್ಸ್’ ಸಾಮಾಜಿಕ ಮಾಧ್ಯಮದಲ್ಲಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಕಳೆದೆರೆಡು ವರ್ಷದಲ್ಲಿ ಧಾರವಾಡ ಜಿಲ್ಲೆಯಲ್ಲಿ ರೈತರ ಆತ್ಮಹತ್ಯೆ ಹೆಚ್ಚಿದ ವರದಿ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ರೈತರ ಹಿತರಕ್ಷಣೆಗಾಗಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಾಕಷ್ಟು ಕ್ರಮ-ಉಪಕ್ರಮಗಳನ್ನು ಕೈಗೊಂಡಿದೆ. ಹೀಗಿದ್ದರೂ ರಾಜ್ಯದಲ್ಲಿ ರೈತರ ಆತ್ಮಹತ್ಯೆ ಪ್ರಕರಣ ಅಧಿಕವಾಗಲು ರಾಜ್ಯ ಸರ್ಕಾರದ ನಿರ್ಲಕ್ಷ್ಯವೇ ಕಾರಣ ಎಂದು ಟೀಕಿಸಿದ್ದಾರೆ.
ಮಾತೆತ್ತಿದರೆ ತಾವು ರೈತಪರ ಎನ್ನುವ ಸಿಎಂ ಸಿದ್ಧರಾಮಯ್ಯ ಸರ್ಕಾರ ರೈತರ ಕುರಿತು ಎಳ್ಳಷ್ಟೂ ಕಾಳಜಿ ತೋರಿಸಿಲ್ಲ ಎಂದು ಆರೋಪಿಸಿದ್ದಾರೆ.
ಸೂಕ್ತ ಬೆಳೆ ವಿಮೆ ಹಾಗೂ ಸಮರ್ಪಕ ಬೆಳೆ ಪರಿಹಾರವನ್ನು ರೈತರು ಇದೂವರೆಗು ಕಂಡಿಲ್ಲ. ಹೀಗಾಗಿ, ರೈತ ಸಮೂಹ ಕಂಗೆಟ್ಟು ಕುಳಿತಿದೆ. ಅಲ್ಲದೇ, ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಿದ್ದರು ಸರ್ಕಾರ ಕಿವುಡುತನ ಪ್ರದರ್ಶಿಸುತ್ತಿದೆ ಎಂದು ಪ್ರಲ್ಹಾದ ಜೋಶಿ ಹರಿ ಹಾಯ್ದಿದ್ದಾರೆ.
ಅಭಿವೃದ್ಧಿ ಕುಂಠಿತ: ಈ ಬಿಟ್ಟಿ ಭಾಗ್ಯಗಳ ಗ್ಯಾರಂಟಿಯ ದೆಸೆಯಿಂದ ರಾಜ್ಯದ ಅಭಿವೃದ್ಧಿ ಕುಂಠಿತವಾಗಿದೆ. ಅಲ್ಲದೇ ಕಂಗಾಲಾದ ರೈತರಿಗೆ ತುಸು ಧೈರ್ಯ ತರುವಂತಹ ಬೆಳೆ ವಿಮೆ-ಬೆಳೆ ಪರಿಹಾರಗಳೂ ಇಲ್ಲವಾಗಿವೆ. ಜತೆಗೆ ಬಿಟ್ಟಿ ಭಾಗ್ಯಗಳೂ ನಾಮಕಾವಸ್ಥೆ ಆಗಿವೆ ಎಂದು ಹೇಳಿದ್ದಾರೆ.
ಡಿಸಿಎಂ ಹುದ್ದೆಗೆ ಕಿತ್ತಾಟ: ರಾಜ್ಯದಲ್ಲಿ ಇಷ್ಟು ಅವ್ಯವಸ್ಥೆ ಇದ್ದರೂ ನಾಚಿಕೆ ಇಲ್ಲದವರಂತೆ ಹೆಚ್ಚಿನ ಉಪ ಮುಖ್ಯಮಂತ್ರಿ ಸ್ಥಾನಕ್ಕಾಗಿ ಕಿತ್ತಾಟದಲ್ಲಿ ತೊಡಗಿದ್ದಾರೆ ಎಂದು ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.