ರಾಹುಲ್ ಗಾಂಧಿ ವಿರುದ್ಧ ಅವಹೇಳನಾಕಾರಿ ಹೇಳಿಕೆ: ಭರತ್ ಶೆಟ್ಟಿ ವಿರುದ್ಧದ ಎಫ್​ಐಆರ್​ಗೆ ಹೈಕೋರ್ಟ್ ತಡೆ

0
12

ಮಂಗಳೂರು: ಲೋಕಸಭಾ ವಿಪಕ್ಷ ನಾಯಕ ರಾಹುಲ್‌ ಗಾಂಧಿ ನಿಂದನೆಗೆ ಸಂಬಂಧಿಸಿ ಮಂಗಳೂರು ಉತ್ತರ ಶಾಸಕ ಡಾ. ಭರತ್‌ ಶೆಟ್ಟಿ ವಿರುದ್ಧ ಕಾವೂರು ಪೊಲೀಸರು ದಾಖಲಿಸಿದ ಎಫ್​ಐಆರ್​ಗೆ ಹೈಕೋರ್ಟ್‌ ಶುಕ್ರವಾರ ತಡೆಯಾಜ್ಞೆ ನೀಡಿದೆ. ಮಾತ್ರವಲ್ಲ ಮುಂದಿನ ತೀರ್ಮಾನವರೆಗೆ ಯಾವುದೇ ವಿಚಾರಣೆ ಪ್ರಕ್ರಿಯೆ ನಡೆಸದಂತೆ ಸೂಚಿಸಿದೆ.
ಲೋಕಸಭಾ ಅಧಿವೇಶನದಲ್ಲಿ ರಾಹುಲ್‌ ಗಾಂಧಿ ಹಿಂದು ನಿಂದನೆ ಮಾಡಿದ್ದಾರೆ ಎಂದು ಆರೋಪಿಸಿ ಮಂಗಳೂರಿನಲ್ಲಿ ಬಿಜೆಪಿ ಯುವ ಮೋರ್ಚಾ ಪ್ರತಿಭಟನೆ ಆಯೋಜಿಸಿತ್ತು. ಈ ವೇಳೆ ಶಾಸಕ ಡಾ. ಭರತ್‌ ಶೆಟ್ಟಿ ಅವರು ಹಿಂದು ನಿಂದಿಸಿದ ರಾಹುಲ್‌ ಗಾಂಧಿಯ ಕಪಾಳಕ್ಕೆ ಬಾರಿಸುವ ಎಂದು ಅನಿಸುತ್ತಿದೆ ಎಂದು ಹೇಳಿದ್ದರು. ರಾಹುಲ್‌ ಗಾಂಧಿ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ ಎಂದು ಕಾಂಗ್ರೆಸ್‌ ಪ್ರತಿಭಟನೆ ನಡೆಸಿತ್ತಲ್ಲದೆ, ಪಾಲಿಕೆ ಸದಸ್ಯ ಅನಿಲ್‌ ಕುಮಾರ್‌ ಅವರು ಕಾವೂರು ಪೊಲೀಸ್‌ ಠಾಣೆಗೆ ದೂರು ನೀಡಿದ್ದರು. ಪೊಲೀಸರು ಎಫ್‌ಐಆರ್‌ ದಾಖಲಿಸಿ ಮೂರು ದಿನದಲ್ಲಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್‌ ಜಾರಿಗೊಳಿಸಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಡಾ.ಭರತ್‌ ಶೆಟ್ಟಿ ಅವರು ಜಾಮೀನಿಗೆ ಹೈಕೋರ್ಟ್‌ ಮೊರೆ ಹೋಗಿದ್ದರು. ಬೆಂಗಳೂರಿನ ವಿಶೇಷ ನ್ಯಾಯಾಲಯ ಜು.11ರಂದು ಡಾ.ಭರತ್‌ ಶೆಟ್ಟಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ಮಂಜೂರು ಮಾಡಿತ್ತು. ಇದೀಗ ಜಸ್ಟಿಸ್‌ ಕೃಷ್ಣ ದೀಕ್ಷಿತ್‌ ಅವರ ನ್ಯಾಯಪೀಠ ಎಫ್‌ಐಆರ್‌ಗೆ ತಡೆ ನೀಡಿದ್ದು, ಮುಂದಿನ ತೀರ್ಮಾನ ವರೆಗೆ ವಿಚಾರಣೆ ನಡೆಸದಂತೆ ಸೂಚಿಸಿದೆ. ಶಾಸಕರ ಪರವಾಗಿ ಹಿರಿಯ ನ್ಯಾಯವಾದಿ ಅರುಣ್‌ಶ್ಯಾಮ್‌ ವಾದಿಸಿದ್ದರು. ಇತ್ತೀಚೆಗೆ ಶಾಸಕರ ಪರವಾಗಿ ಕಾವೂರಿನಲ್ಲಿ ಬೃಹತ್‌ ಪ್ರತಿಭಟನೆ ನಡೆದು ವಿಪಕ್ಷ ನಾಯಕ ಆರ್‌.ಅಶೋಕ್‌ ಮತ್ತಿತರರ ಉಪಸ್ಥಿತಿಯಲ್ಲಿ ಡಾ.ಭರತ್‌ ಶೆಟ್ಟಿ ಅವರು ಕಾವೂರು ಠಾಣೆಗೆ ತೆರಳಿ ವಿಚಾರಣಾ ಹೇಳಿಕೆ ದಾಖಲಿಸಿದ್ದರು.

Previous articleದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆ ಅಬ್ಬರ: ಯುವತಿ ಸಾವು
Next articleನಾಳೆ ಶಾಲಾ-ಕಾಲೇಜುಗಳಿಗೆ ರಜೆ