ಮಲ್ಲಿಕಾರ್ಜುನ ಚಿಲ್ಕರಾಗಿ, ಬಳ್ಳಾರಿ
ವಿರೋಧದ ನಡುವೆಯೂ ವಿಶ್ವೇಶ್ವರಯ್ಯ ಐರನ್ ಆಂಡ್ ಸ್ಟೀಲ್(ವಿಐಎಸ್‌ಎಲ್) ಅದಿರು ಕಂಪನಿ ಸಂಡೂರಿನ ರಮಣದುರ್ಗದ ಹೊಸ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ಆರಂಭಿಸುವ ಕಸರತ್ತು ಮುಂದುವರಿಸಿದೆ. ಆದರೆ ಸಮಾಜ ಪರಿವರ್ತನ ಸಮುದಾಯ ಎಸ್‌ಇಎಸಿ, ಎಸ್‌ಇಐಎಎಗೆ ದೂರು ಸಲ್ಲಿಸುವ ಮೂಲಕ ವಿಐಎಸ್‌ಎಲ್ ಆರಂಭಿಕ ಹಂತದಲ್ಲೇ ಅನುಸರಿಸಿದ ತಪ್ಪುಗಳನ್ನು ಎತ್ತಿ ಹಿಡಿದಿದೆ.
ರಾಮಗಡದಲ್ಲಿನ ‘ರಾಮದುರ್ಗ(ರಮಣದುರ್ಗ) ಕಬ್ಬಿಣದ ಅದಿರು ಗಣಿ’ ಬ್ಲಾಕ್ ಸರ್ವೆ ನಂ.೧೩/೧ರಲ್ಲಿ ಒಟ್ಟು ೬೦.೭೦ ಹೆಕ್ಟೇರ್ ಪ್ರದೇಶದಲ್ಲಿ ಗಣಿಗಾರಿಕೆ ಆರಂಭಿಸಲು ೨೦೧೯ರಿಂದಲೂ ಪ್ರಯತ್ನ ನಡೆಸಿದೆ. ಈ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ಮೂಲಕ ವಾರ್ಷಿಕವಾಗಿ ೦.೯೦ ಮಿಲಿಯನ್ ಟನ್ ಅದಿರು ಉತ್ಪಾದನೆ ಮಾಡುವ ಉದ್ದೇಶ ಹೊಂದಿದ್ದು, ಇದಕ್ಕಾಗಿ ಹೊಸ ಅರಣ್ಯ ಪ್ರದೇಶದಲ್ಲಿನ ೨೯೬೦೦ ಮರಗಳನ್ನು ನೆಲಸಮ ಮಾಡುವ ಅನಿವಾರ್ಯತೆ ಉಂಟಾಗಿದೆ. ಹೀಗಾಗಿ ಪರಿಸರಕ್ಕೆ ಮಾರಕವಾಗಿರುವ ಈ ಗಣಿಗಾರಿಕೆಯನ್ನು ಕೈ ಬಿಡುವಂತೆ ಪರಿಸರಾಸಕ್ತರು ಹೋರಾಟ ನಡೆಸಿದ್ದರು.
ಪರವಾನಗಿ ದಾವಂತ: ಆಕ್ಷೇಪಣೆಗಳ ನಡುವೆಯೂ ಯೋಜನೆಯ ಆರಂಭಕ್ಕೆ ಪೂರಕವಾಗಿ ೨೦೨೪ರ ಆ.೨ರಂದು ಸಂಡೂರಿನ ಗಣಿಗಾರಿಕೆ ನಡೆಸಲು ಉದ್ದೇಶಿಸಿದ ಬ್ಲಾಕ್‌ನಲ್ಲಿ ಸಾರ್ವಜನಿಕ ಆಲಪನಾ ಸಭೆಯನ್ನು ಪರಿಸರ ಮಾಲಿನ್ಯ ಮಂಡಳಿ ಮತ್ತು ಕಂದಾಯ ಇಲಾಖೆ ನಡೆಸಿತ್ತು. ಸಭೆಯಲ್ಲಿ ಪರ-ವಿರೋಧ ಎರಡು ಅಭಿಪ್ರಾಯಗಳು ವ್ಯಕ್ತವಾದರೂ, ಗಣಿಗಾರಿಕೆ ಅನುಮತಿ ಪಡೆಯುವ ದಾವಂತದಲ್ಲಿ ಇಐಎ(ಪರಿಸರ ಪ್ರಭಾವದ ಮೌಲ್ಯಮಾಪನ) ವರದಿ ತಯಾರಿಸುವಾಗ ವಿರೋಧ ಹೇಳಿಕೆಗಳನ್ನು ಮರೆಮಾಚಿ ಗಣಿಗಾರಿಕೆ ಆರಂಭಿಸಲು ಅಗತ್ಯವಿರುವ ಪೂರಕ ಹೇಳಿಕೆಗಳನ್ನು ಒಳಗೊಂಡ ವರದಿ ನೀಡಲಾಗಿದೆ. ಈ ಅಂಶಗಳ ಆಧಾರದ ಮೇಲೆ ಗಣಿಗಾರಿಕೆ ಅನುಮತಿ ಪಡೆಯಲು ಇಸಿ ಪ್ರಮಾಣ ಪತ್ರ ಪಡೆಯಲು ರಾಜ್ಯ ಪರಿಸರ ಅಂದಾಜೀಕರಣ ಸಮಿತಿ(ಎಸ್‌ಇಎಸಿ) ಮತ್ತು ರಾಜ್ಯ ಪರಿಸರ ಆಘಾತ ಅಂದಾಜೀಕರಣ ಪ್ರಾಧಿಕಾರ(ಎಸ್‌ಇಐಎಎ)ದ ಮುಂದೆ ಪ್ರಸ್ತಾವನೆ ಇಡಲಾಗಿದೆ.
ದೂರು ನೀಡಿದ ಸಪಸ: ಇಐಎ ವರದಿಯಲ್ಲಿನ ಸುಳ್ಳು ಅಂಶಗಳನ್ನು ಗಮನಿಸಿರುವ ಸಮಾಜ ಪರಿವರ್ತನ ಸಮುದಾಯ ಆಕ್ಷೇಪ ಎತ್ತಿದೆ. ಎಸ್‌ಇಎಸಿ ಮತ್ತು ಎಸ್‌ಇಐಎಎಗೆ ದೂರು ಸಲ್ಲಿಸಿರುವ ಮೂಲಕ ವರದಿಯಲ್ಲಿನ ತಪ್ಪುಗಳನ್ನು ಎತ್ತಿ ಹಿಡಿದಿದೆ. ಇಐಎ ವರದಿಯಲ್ಲಿನ ಅಂಶಗಳು ವಿಐಎಸ್‌ಎಲ್ ಗಣಿಗಾರಿಕೆಗಾಗಿ ತಯಾರಿಸಿದ್ದಲ್ಲ; ಬದಲಾಗಿ ಜಿಂದಾಲ್(ಜೆಎಸ್‌ಡಬ್ಲೂö್ಯ)ನ ಧರ್ಮ ಮೈನ್ಸ್ ಮತ್ತು ರಾಮ ಮೈನ್ಸ್ಗೆ ತಯಾರಿಸಲಾಗಿದ್ದ ಅಂಕಿ-ಅAಶಗಳು, ಹೇಳಿಕೆಗಳನ್ನು ಇಐಎನಲ್ಲಿ ನೀಡಲಾಗಿದೆ ಎಂದು ಹೇಳಿಕೆಯ ದಾಖಲೆ ಸಹಿತ ದೂರು ನೀಡಲಾಗಿದೆ. ಒಟ್ಟಿನಲ್ಲಿ ಸಂಡೂರಿನ ಹೊಸ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸುವ ವಿಐಎಸ್‌ಎಲ್ ಪ್ರಯತ್ನ ತೀವ್ರವಾಗಿದ್ದು, ಏನಾಗಲಿದೆ ಕಾದು ನೋಡಬೇಕಿದೆ.
ಸಂಡೂರಿನ ರಾಮಗಡದಲ್ಲಿ ವಿಐಎಸ್‌ಎಲ್ ಗಣಿಗಾರಿಕೆ ನಡೆಸುವ ದಾವಂತ ಖಾಸಗಿ ಕಂಪನಿಗಳನ್ನು ಮೀರಿಸುವಂತೆ ಇದೆ. ತಪ್ಪು ಮತ್ತು ದೋಷಪೂರಿತವಾಗಿ ತಯಾರಿಸಲಾದ ಇಐಎ ವರದಿ ಬಗ್ಗೆ ದೂರು ನೀಡಲಾಗಿದೆ. ಯಾವುದೇ ಕಾರಣಕ್ಕೂ ಹೊಸ ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಲು ಅನುಮತಿ ನೀಡಲು ಬಿಡುವುದಿಲ್ಲ.
– ಶ್ರೀಶೈಲ ಆಲ್ದಳ್ಳಿ, ಜನಸಂಗ್ರಾಮ ಪರಷತ್ ಬಳ್ಳಾರಿ.