ರಾಣಿ ಚೆನ್ನಮ್ಮ ವಿವಿಯಿಂದ ನಿಡಸೋಸಿ ಶ್ರೀಗಳಿಗೆ ಗೌರವ ಡಾಕ್ಟರೇಟ್

ಬೆಳಗಾವಿ: ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯದ ೧೩ನೇ ವಾರ್ಷಿಕ ಘಟಿಕೋತ್ಸವ ಏ. 11ರಂದು ನಡೆಯಲಿದ್ದು, ಈ ಸಂದರ್ಭದಲ್ಲಿ ಕೃಷಿ, ಶಿಕ್ಷಣ ಮತ್ತು ಸಮಾಜಸೇವೆಗಾಗಿ ನಿಡಸೋಸಿ ದುರುದುಂಡೇಶ್ವರ ಸಿದ್ಧಸಂಸ್ಥಾನ ಮಠದ ಪಂಚಮ ಶಿವಲಿಂಗೇಶ್ವರ ಮಹಾಸ್ವಾಮೀಜಿ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಗುತ್ತಿದೆ.
ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿದ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಸಿ.ಎಂ.ತ್ಯಾಗರಾಜ್, ಸಂವಿಧಾನ ಜಾಗೃತಿಯಲ್ಲಿ ಕಾರ್ಯತತ್ಪರರಾದ ಮುಖ್ಯ ನ್ಯಾಯಮೂರ್ತಿ ಎಚ್.ಎನ್.ನಾಗಮೋಹನದಾಸ ಅವರಿಗೆ ಡಾಕ್ಟರ್ ಆಫ್ ಲಾ ಗೌರವ ಹಾಗೂ ಶಿಕ್ಷಣ, ಸಹಕಾರ ಮತ್ತು ಸಾಮಾಜಿಕ ಸೇವೆಗಾಗಿ ವಿಜಯಪುರದ ಸೀಕ್ಯಾಬ್ ಸಂಸ್ಥಾಪಕರು ಹಾಗೂ ಅಧ್ಯಕ್ಷ ಶಮಸುದ್ಧಿನ್ ಅಬ್ದುಲ್ಲಾ ಪುಣೇಕರ್ ಅವರಿಗೆ ಡಾಕ್ಟರ್ ಆಫ್ ಸೈನ್ಸ್ ಗೌರವ ಸಲ್ಲಿಸಲಾಗುವುದು ಎಂದು ತಿಳಿಸಿದರು.
ವಿಶ್ವವಿದ್ಯಾಲಯದ ಒಟ್ಟು ೪೬೦೧೩ ವಿದ್ಯಾರ್ಥಿಗಳು ಸ್ನಾತಕ ಪದವಿ ಹಾಗೂ ೨೮೬೬ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿ ಪಡೆದುಕೊಳ್ಳಲು ಅರ್ಹರಾಗಿದ್ದಾರೆ. ೧೧ ಸುವರ್ಣ ಪದಕ ಹಾಗೂ ಒಂದು ನಗದು ಬಹುಮಾನವನ್ನು ಸ್ನಾತಕ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ನೀಡಲಾಗುತ್ತಿದೆ. ೨೦ ವಿದ್ಯಾರ್ಥಿಗಳಿಗೆ ಪಿಚ್‌ಡಿ ಪದವಿ ಪ್ರದಾನ ಮಾಡಲಾಗುವುದು ಎಂದು ಮಾಹಿತಿ ನೀಡಿದರು.