ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರ ಪತನವಾಗುವ ಸಮಯ ಹತ್ತಿರವಾಗಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಕೇಂದ್ರ ಸಚಿವ ಹೆಚ್.ಡಿ.ಕುಮಾಸ್ವಾಮಿ ಭವಿಷ್ಯ ನುಡಿದಿದ್ದಾರೆ.
ಬಿಜೆಪಿ-ಜೆಡಿಎಸ್ ಹಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯ ಮೂರನೇ ದಿನವಾದ ಸೋಮವಾರ ಕೆಂಗಲ್ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಬಳಿಕ ಪಾದಯಾತ್ರೆಯಲ್ಲಿ ಪಾಲ್ಗೊಂಡು ಮಾತನಾಡಿದ ಎಚ್ಡಿಕೆ, ರಾಜ್ಯ ಸರ್ಕಾರದ ಪಾಪದ ಕೊಡ ತುಂಬಿದ್ದು ಪತನಗೊಳ್ಳುವ ಕಾಲ ಸನ್ನಿಹಿತವಾಗಿದ್ದು ಅಧಿಕಾರದಲ್ಲಿ ಮುಂದುವರಿಯಲು ಕಾಂಗ್ರೆಸ್‌ನವರಿಗೆ ಯೋಗ್ಯತೆ ಇದೆಯೇ ಎಂದು ಪ್ರಶ್ನಿಸಿದ್ದಾರೆ.
ಕಳೆದ ಎರಡು ದಿನಗಳಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರೂ ನಡಿಗೆ ಮಾಡದಿದ್ದ ಕುಮಾರಸ್ವಾಮಿ ಅವರು ಮೂರನೇ ದಿನವಾದ ಸೋಮವಾರ ಕೆಂಗಲ್ ಆಂಜನೇಯಸ್ವಾಮಿ ದೇವಸ್ಥಾನದಿಂದ ಸುಮಾರು ಮೂರು ಕಿಲೋಮೀಟರ್‌ವರೆಗೂ ಪಾದಯಾತ್ರೆ ನಡೆಸಿದ್ದು ವಿಶೇಷವಾಗಿತ್ತು.