ಸಂ.ಕ.ಸಮಾಚಾರ ಕಲಬುರಗಿ : ಲಿಂಗಾಯತ ದೀಕ್ಷ ಪಂಚಮಸಾಲಿ, ಮಲೆಗೌಡ, ಗೌಡ ಲಿಂಗಾಯತ ಸಮುದಾಯಕ್ಕೆ ೨ಎ ಮೀಸಲಾತಿ ಕಲ್ಪಿಸದಿದ್ದರೆ ೮ನೇ ಹಂತದ ಹೋರಾಟಕ್ಕೆ ಸಜ್ಜಾಗಬೇಕಾಗುತ್ತದೆ ಎಂದು ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ರಾಜ್ಯ ಸರ್ಕಾರಕ್ಕೆ ಎಚ್ಚರಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇದೇ ತಿಂಗಳ ಕೊನೆ ವಾರದಲ್ಲಿ ಕೂಡಲಸಂಗಮದಿAದಲೇ ಸಮಾಜದ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಹೋರಾಟ ರೂಪಿಸಲಾಗುವುದು. ರಾಜ್ಯದ ಪ್ರತಿ ವಿಧಾನಸಭಾ ಕ್ಷೇತ್ರಗಳಲ್ಲಿ ಈ ಜಾಗೃತಿ ಅಭಿಯಾನ ನಡೆಸಿ ಜನಾಭಿಪ್ರಾಯ ಸಂಗ್ರಹಿಸಿ ಮುಂದಿನ ಹೋರಾಟದ ರೂಪರೇಷ ನಿರ್ಧರಿಸಲಾಗುವುದು ಎಂದರು.
ಶಿಕ್ಷಣ ಮತ್ತು ಉದ್ಯೋಗದಲ್ಲಿ ನಮ್ಮ ಸಮಾಜಕ್ಕೆ ೨ಎ ಮೀಸಲಾತಿ ನೀಡುವಂತೆ ಕಳೆದ ಡಿಸೆಂಬರ್ ೨, ೨೦೨೪ ರಂದು ಬೆಳಗಾವಿಯಲ್ಲಿ ನಡೆದ ಅಧಿವೇಶನದ ವೇಳೆ ಲಿಂಗಾಯತ ದೀಕ್ಷ ಪಂಚಮಸಾಲಿ ಸಮುದಾಯದರು ನಡೆಸಿದ ಹೋರಾಟ ಸಂದರ್ಭದಲ್ಲಿ ಸರ್ಕಾರದ ನಿರ್ದೇಶನದ ಮೇರೆಗೆ ಪೊಲೀಸ್ ಅಧಿಕಾರಿಗಳು, ಪೊಲೀಸರು ಲಾಠಿ ಪ್ರಹಾರ ನಡೆಸಿ ಮಾರಣಾಂತಿಕ ಹಲ್ಲೆ ಕೈಗೊಂಡಿದ್ದರು. ಈ ಘಟನೆಯಲ್ಲಿ ಸಮಾಜದ ನೂರಾರು ಜನರು ಗಾಯಗೊಂಡು ನಕರಯಾತನೆ ಅನುಭವಿಸಿದ್ದಾರೆ ಎಂದರು.
ಘಟನೆ ಕುರಿತು ಧಾರವಾಡ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಲಾಗಿತ್ತು. ನ್ಯಾಯಾಂಗ ತನಿಖೆ ನಡೆಸಿ ೩ ತಿಂಗಳೊಳಗೆ ವರದಿ ಸಲ್ಲಿಸುವಂತೆ ಹೈಕೋರ್ಟ್ ಆದೇಶ ನೀಡಿ ೨ ತಿಂಗಳು ಗತಿಸಿದ್ದರೂ ಸಹ ಇದುವರೆಗೂ ಸಿಎಂ ಸಿದ್ದರಾಮಯ್ಯನವರು ಸಮಿತಿ ರಚಿಸಿ ಮತ್ತು ತನಿಖೆ ಪ್ರಕ್ರಿಯೆ ಕೈಗೊಳ್ಳದೆ ಇರುವುದು ನೋಡಿದರೆ ಕೋರ್ಟ್ ಆದೇಶಕ್ಕೆ ಗೌರವ ಕೊಡುತ್ತಿಲ್ಲವೆಂದು ಅನುಮಾನ ವ್ಯಕ್ತವಾಗುತ್ತಿದೆ. ಇನ್ನೊಂದೆಡೆ ಸಿಎಂಗೆ ತಮ್ಮ ತಪ್ಪಿನ ಅರಿವಾಗಿ ನಮಗೆ ಕ್ಷಮೆ ಕೇಳಲು ಮುಜುಗರವಾಗುತ್ತಿದೆ ಎಂದು ಭಾಸವಾಗುತ್ತಿದೆ. ಸಿಎಂ ಕೂಡಲೇ ನಿವೃತ್ತ ನ್ಯಾಯಮೂರ್ತಿಗಳನ್ನು ನೇಮಕ ಮಾಡಿ ತನಿಖೆಗೆ ಒಪ್ಪಿಸುವ ಮೂಲಕ ಕೋರ್ಟ್ ಆದೇಶ ಪಾಲನೆ ಮಾಡಬೇಕು. ಈ ತನಿಖೆಯಿಂದ ಹೋರಾಟಗಾರರಿಂದ ತಪ್ಪಾಗಿದೆಯೇ ಅಥವಾ ಸರ್ಕಾರ, ಪೊಲೀಸ್ ಅಧಿಕಾರಿಗಳಿಂದ ತಪ್ಪಾಗಿದೆಯೇ ಎಂಬುದು ಕುರಿತು ಸತ್ಯಾಸತ್ಯತೆ ಹೊರಬರಲಿದೆ. ಲಾಠಿ ಪ್ರಹಾರ ಮಾಡಿದ ಅಧಿಕಾರಿಗಳಿಗೆ ಶಿಕ್ಷೆ ಆಗಬೇಕು ಮತ್ತು ಸರ್ಕಾರ ಕ್ಷಮೆಯಾಚಿಸಬೇಕು ಎಂದು ಶ್ರೀ ಜಯಮೃತ್ಯುಂಜಯ ಸ್ವಾಮೀಜಿ ಒತ್ತಾಯಿಸಿದರು.