ಕೊಪ್ಪಳ: ಮೇಘಾಲಯ ರಾಜ್ಯಪಾಲ ವಿಜಯಶಂಕರ ನಗರದ ಗವಿಮಠಕ್ಕೆ ಶನಿವಾರ ಭೇಟಿ ನೀಡಿ, ಗವಿಸಿದ್ಧೇಶ್ವರರ ಗದ್ದುಗೆಗೆ ದರ್ಶನ ಪಡೆದರು.
ದಕ್ಷಿಣ ಭಾರತದ ಕುಂಭಮೇಳ ಎಂದೇ ಪ್ರಸಿದ್ಧವಾದ ಗವಿಮಠದ ಪರಂಪರೆ, ಪೀಠಾಧಿಪತಿಗಳು, ಶಿಕ್ಷಣ ಕ್ರಾಂತಿ, ದಾಸೋಹ ಮತ್ತು ಮಹಾರಥೋತ್ಸವದ ಜಾತ್ರಾ ಮಹೋತ್ಸವದ ಕುರಿತು ರಾಜ್ಯಪಾಲ ವಿಜಯಶಂಕರ ಮಾಹಿತಿ ಪಡೆದರು.
ಗವಿಶ್ರೀಗಳೊಂದಿಗೆ ಕುಶಲೋಪರಿ: ಗವಿಮಠದ ಅಭಿನವ ಗವಿಸಿದ್ಧೇಶ್ವರ ಸ್ವಾಮೀಜಿಗಳ ಜತೆಗೆ ಮೇಘಾಲಯ ರಾಜ್ಯಪಾಲ ಸಿ.ಎಚ್.ವಿಜಯಶಂಕರ ಪರಸ್ಪರರು ಕುಶಲೋಪರಿ ವಿನಿಮಯ ಮಾಡಿದರು. ಬಳಿಕ ವಿಜಯಶಂಕರರವರು ರೇಷ್ಮೆ ಶಾಲು ಉಡುಗೊರೆಯಾಗಿ ನೀಡಿದರು. ಕೆಲಕಾಲ ವಿವಿಧ ವಿಷಯಗಳ ಕುರಿತು ಚರ್ಚಿಸಿದರು. ನಂತರ ಗವಿಮಠದ ದಾಸೋಹ ಭವನದಲ್ಲಿ ಉಪಹಾರ ಸೇವಿಸಿದರು.
ಶಾಸಕ ಕೆ.ರಾಘವೇಂದ್ರ ಹಿಟ್ನಾಳ, ಬಿಜೆಪಿ ಜಿಲ್ಲಾಧ್ಯಕ್ಷ ಬಸವರಾಜ ದಡೇಸಗೂರು, ಬಿಜೆಪಿ ವಿಭಾಗೀಯ ಸಹಪ್ರಭಾರಿ ಚಂದ್ರಶೇಖರ ಪಾಟೀಲ್ ಹಲಗೇರಿ, ಜೆಡಿಎಸ್ ಕೋರ್ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್, ನಗರಾಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮಹಾಂತೇಶ ಪಾಟೀಲ್ ಮೈನಳ್ಳಿ, ಬಿಜೆಪಿ ನಗರಾಧ್ಯಕ್ಷ ರಮೇಶ ಕವಲೂರು, ಜೆಡಿಎಸ್ ನಗರಾಧ್ಯಕ್ಷ ಸೋಮನಗೌಡ ವಗರನಾಳ, ಡಿ.ಮಲ್ಲಣ್ಣ ಇದ್ದರು.