ರಾಜ್ಯದ ಜನರಿಗೆ ತಪ್ಪು ಮಾಹಿತಿ ನೀಡಲು ಬಿಜೆಪಿ ಪಾದಯಾತ್ರೆ ನಡೆಸುತ್ತದೆ

0
11
ಪರಮೇಶ್ವರ್

ದಾವಣಗೆರೆ: ಹಿಂದೆ ರಾಜ್ಯದ ಸಂಪತ್ತನ್ನು ಲೂಟಿ ಮಾಡುತ್ತಿರುವವರ ಮತ್ತು ಅಕ್ರಮ ಗಣಿಗಾರಿಕೆ ವಿರುದ್ಧ ಕಾಂಗ್ರೆಸ್ ನಿಂದ ಪಾದಯಾತ್ರೆ ನಡೆಸಲಾಯಿತು. ಆದರೆ, ಈಗ ಬಿಜೆಪಿಗರು ಸಿಎಂ ಸಿದ್ದರಾಮಯ್ಯ ವಿರುದ್ಧ ಅನಗತ್ಯ ಆರೋಪ ಮಾಡಿ, ರಾಜ್ಯದ ಜನರಿಗೆ ತಪ್ಪು ಸಂದೇಶ ನೀಡುವ ಉದ್ದೇಶದಿಂದ ಪಾದಯಾತ್ರೆ ನಡೆಸಲು ಹೊರಟಿದ್ದಾರೆ ಎಂದು ಗೃಹ ಸಚಿವ ಡಾ. ಜಿ. ಪರಮೇಶ್ವರ್ ಆರೋಪಿಸಿದರು.

ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಿಂದೆ ನಡೆಸಿದ ಪಾದಯಾತ್ರೆಯಲ್ಲಿ ನಿಜಾಂಶವಿತ್ತು. ರಾಜ್ಯದ ಸಂಪತ್ತು ಉಳಿಸುವ ಸದುದ್ದೇಶದಿಂದ ಪಾದಯಾತ್ರೆ ನಡೆಸಿತು. ಆದರೆ, ಈಗ ಬಿಜೆಪಿಯವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಅನಗತ್ಯ ಆರೋಪಗಳನ್ನು ಮಾಡಿ ಪಾದಯಾತ್ರೆ ಮಾಡಲು ಹೊರಟಿದ್ದಾರೆ. ಯಾವುದೇ ರೀತಿ ಕಾನೂನು ಬಾಹಿರವಾಗಿ ನಡೆಯದೇ ಇರುವ ಪ್ರಕರಣವನ್ನು ಜನರಿಗೆ ಪಾದಯಾತ್ರೆ ಮಾಡುವ ಮೂಲಕ ತಪ್ಪು ಮಾಹಿತಿ ಕೊಡಲು ಪ್ರಯತ್ನಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು.

ನಾವು ರಾಜ್ಯದ ಜನರಿಗೆ ಬಿಜೆಪಿಗರ ಪಾದಯಾತ್ರೆಯ ದುರುದ್ದೇಶ ಮತ್ತು ಹಿಂದಿನ ನಮ್ಮ ಪಾದಯಾತ್ರೆಯ ಸದುದ್ದೇಶದ ವ್ಯತ್ಯಾಸವನ್ನು ತಿಳಿಸುತ್ತೇವೆ. ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ, ಕಾನೂನುಬಾಹಿರವಾಗಿ ಯಾವುದು ನಡೆದಿಲ್ಲ ಎಂಬುದನ್ನು ಜನರಿಗೆ ಮನವರಿಕೆ ಮಾಡಿಸುತ್ತೇವೆ. ಈಗಾಗಲೇ ತಪ್ಪಿಲ್ಲದ ಕಾರಣಕ್ಕಾಗಿಯೇ ವಾಲ್ಮೀಕಿ ಹಗರಣ ಮತ್ತು ಮೂಡ ಬಗ್ಗೆ ಸರಿಯಾದ ತನಿಖೆ ನಡೆಸಲು ಸಿಎಂ ಸಿದ್ದರಾಮಯ್ಯ ಅವರು ನ್ಯಾಯಾಧೀಶರ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ. ವರದಿ ಬಂದ ನಂತರ ಜನರಿಗೆ ತಿಳಿಯುತ್ತದೆ. ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ ಎಂದರು.

ಪೃಥ್ವಿ ಎಂಬ ಯುವಕ ನ್ಯಾಯ ಸಿಗದಿದ್ದರೆ ಭಯೋತ್ಪಾದಕ ಆಗುವುದಾಗಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ಮಾಡಿರುವುದರ ಬಗ್ಗೆ ಪ್ರತಿಕ್ರಿಸಿದ ಪರಮೇಶ್ವರ್, ಆ ಬಗ್ಗೆ ಸೂಕ್ತ ತನಿಖೆ ನಡೆಸಲಾಗುವುದು. ಇಂತಹ ಆರೋಪಗಳು ಬಂದಾಗ ಯಾವುದೇ ಪೊಲೀಸ್ ಠಾಣೆಯಲ್ಲಿ ಇಲಾಖೆಯವರು ತನಿಖೆ ನಡೆಸಿ ಪೊಲೀಸರದ್ದೇ ತಪ್ಪಿದ್ದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದರು.

ನಾಯಿ ಮಾಂಸ ಮಾರಾಟ ಪ್ರಕರಣ ಕುರಿತು ಪ್ರತಿಕ್ರಿಯಿಸಿದ ಅವರು, ರಾಜಸ್ಥಾನದಿಂದ ಪ್ರತಿವಾರ ಅಥವಾ 15 ದಿನಗಳಿಗೊಮ್ಮೆ ಮಾಂಸ ತಂದು ಮಾರಾಟ ಮಾಡುವುದು ಅವರ ವೃತ್ತಿ. ಆದರೆ ಕೆಲವರು ಅನಾವಶ್ಯಕವಾಗಿ ನಾಯಿ ಮಾಂಸ ಎಂದು ಆಪಾದನೆ ಮಾಡಿದ್ದರು. ಈಗ ಪ್ರಯೋಗಾಲಯ ನೀಡಿದ ವರದಿಯ ಅನ್ವಯ ಅದು ಮೇಕೆ ಮಾಂಸ ಎಂಬುದು ಬಹಿರಂಗಗೊಂಡಿದೆ. ಆದ್ದರಿಂದ ಅನಾವಶ್ಯಕವಾಗಿ ದುರುದ್ದೇಶ ಇಟ್ಟುಕೊಂಡು ಈ ರೀತಿ ಆರೋಪ ಮಾಡುವುದು ಸರಿಯಲ್ಲ ಎಂದರು.

ಬಜೆಟ್ ನಲ್ಲಿ ಯಾವುದೇ ಇಲಾಖೆಗೆ ನೀಡಿದ ಅನುದಾನವನ್ನು ಸ್ಥಗಿತಗೊಳಿಸಲು ಆಗುವುದಿಲ್ಲ. ಸ್ವಲ್ಪ ತಡವಾದರೂ ಸಹ ಅದನ್ನು ಇಲಾಖೆಗೆ ಸರ್ಕಾರ ಮಂಜೂರು ಮಾಡುತ್ತದೆ ಎಂದು ಹಿಂದುಳಿದ ವರ್ಗಗಲ ಅಭಿವೃದ್ಧಿ ಇಲಾಖೆಗೆ ಸರ್ಕಾರ ಅನುದಾನ ವಾಪಸ್ ಪಡೆದಿರುವ ಬಗ್ಗೆ ಪ್ರತಿಕ್ರಿಯಿಸಿದರು

Previous articleಪ್ರಜಾಪ್ರಭುತ್ವ ವಚನ ಚಳವಳಿಯ ಅಂತರಾಳ
Next articleರಾಜ್ಯ ಕಾಂಗ್ರೆಸ್‌ನಿಂದ ಕೇಂದ್ರದ ಮೇಲೆ ಗೂಬೆ ಕೂಡಿಸುವ ಕೆಲಸ