ರಾಜ್ಯದಲ್ಲಿ ಲ್ಯಾಂಡ್ ಜಿಹಾದ್‌ಗೆ ರಾಜ್ಯ ಸರ್ಕಾರದ ಕುಮ್ಮಕ್ಕು

0
20

ಹುಬ್ಬಳ್ಳಿ: ರಾಜ್ಯದಲ್ಲಿ ವಕ್ಫ್ ಬೋರ್ಡ್ “ಲ್ಯಾಂಡ್ ಜಿಹಾದ್” ನಡೆಸುತ್ತಿದ್ದು, ಕಾಂಗ್ರೆಸ್ ಸರ್ಕಾರದ ಕುಮ್ಮಕ್ಕೂ ಇದೆ ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ ಜೋಶಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಸಚಿವರು, ಮುಸ್ಲಿಂ ತುಷ್ಟೀಕರಣ ಮತ್ತು ಓಲೈಕೆ ರಾಜಕಾರಣಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಮಟ್ಟಕ್ಕೆ ಇಳಿದಿದ್ದಾರೆ ಎಂದು ಆರೋಪಿಸಿದರು.
ದೇಶಾದ್ಯಂತ ಮುಸ್ಲಿಂ ಸಮುದಾಯವನ್ನು ತಮ್ಮ ಪಕ್ಷದ ಮತ ಬ್ಯಾಂಕ್ ಆಗಿ ಹಿಡಿದಿಟ್ಟುಕೊಳ್ಳಲೆಂದು ೨೦೧೩ರಲ್ಲಿ ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಮತ್ತು ಆಗಿನ ಪ್ರಧಾನಿ ಮನಮೋಹನ್ ಸಿಂಗ್ ಅವರು ವಕ್ಫ್ ಬೋರ್ಡ್‌ಗೆ ಸುಪ್ರೀಂ ಪವರ್ ಕೊಟ್ಟಿದ್ದಾರೆ ಎಂದು ಪ್ರಲ್ಹಾದ ಜೋಶಿ ವಾಗ್ದಾಳಿ ನಡೆಸಿದರು.
ಈಗ ವಕ್ಫ್ ಬೋರ್ಡ್ ಲ್ಯಾಂಡ್ ಜಿಹಾದ್ ಕೈಗೊಳ್ಳುವ ಮೂಲಕ ರಾಜ್ಯದಲ್ಲಿ ರೈತರನ್ನು, ಮಠ ಮಾನ್ಯಗಳನ್ನು ಮತ್ತು ಬಡ ಜನಸಾಮಾನ್ಯರನ್ನು ಹಿಂಸಿಸುತ್ತಿದೆ. ಇದಕ್ಕೆಲ್ಲ ಕಾಂಗ್ರೆಸ್ ಸರ್ಕಾರದ ಓಲೈಕೆ ರಾಜಕಾರಣವೇ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯದಲ್ಲಿ ಸಿದ್ದರಾಮಯ್ಯ ಸರ್ಕಾರ ಇಸ್ಲಾಂ ಮೂಲಭೂತವಾದಿಗಳ ಬೆಂಬಲಕ್ಕೆ ನಿಂತಿದೆ. ಹೀಗಾಗಿಯೇ ವಕ್ಫ್ ಬೋರ್ಡ್ ಎಲ್ಲಿ ಬೇಕಲ್ಲಿ ರೈತರ ಜಮೀನು ಕಬಳಿಸುತ್ತಿದೆ. ೪೦-೫೦ ವರ್ಷಗಳಿಂದ ಉಳುಮೆ ಮಾಡುತ್ತಿರುವ ಜಮೀನು ನಮಾಜ್ ಮಾಡುತ್ತಿದ್ದ ಸ್ಥಳವೆಂದು ವಶಕ್ಕೆ ತೆಗೆದುಕೊಳ್ಳಲು ಯತ್ನಿಸಿದೆ. ಇದಕ್ಕೆಲ್ಲ ಅಧಿಕಾರ ಕೊಟ್ಟವರೇ ಕಾಂಗ್ರೆಸ್ಸಿಗರು ಎಂದು ಜೋಶಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ವಿಜಯಪುರ ಡಿಸಿ ಮೂರ್ಖತನ
ತಲತಲಾಂತರಿಂದ ಇರುವ ರೈತರ ಜಮೀನು, ಮಠದ ಆಸ್ತಿಯನ್ನು ವಕ್ಫ್ ಆಸ್ತಿಯಾಗಿ ಪರಿವರ್ತಿಸುವಲ್ಲಿ ವಿಜಯಪುರ ಜಿಲ್ಲಾಧಿಕಾರಿ ಮೂರ್ಖತನ ತೋರಿದ್ದಾರೆ. ಈಗ ಸರಿಪಡಿಸಲು ದಾಖಲೆ ಕೊಡಿ ಎನ್ನುತ್ತಿದ್ದಾರೆ. ರೈತರೇಕೆ ದಾಖಲೆ ಕೊಡಬೇಕು? ಲೋಪ ಮಾಡಿರುವುದು ನೀವು. ನೀವೇ ಸರಿಪಡಿಸಿ ಎಂದು ಸಚಿವ ಪ್ರಲ್ಹಾದ ಜೋಶಿ ಹರಿಹಾಯ್ದರು.
ಇದರಲ್ಲಿ ಜಿಲ್ಲಾಧಿಕಾರಿ ಪಾತ್ರಕ್ಕಿಂತ ಸಿಎಂ ಸಿದ್ದರಾಮಯ್ಯ ಮತ್ತು ಜಮೀರ್ ಅಹ್ಮದ್ ಸೇರಿದಂತೆ ಪ್ರಮುಖ ಸಚಿವರದ್ದೇ ಪಾತ್ರವಿದೆ. ಹಾಗಾಗಿ, ತಹಶೀಲ್ದಾರ್ ಮತ್ತು ಅಧಿಕಾರಿಗಳು ರೈತರ ಪಹಣಿ ತಿದ್ದುಪಡಿ ಮಾಡಿದ್ದಾರೆ ಎಂದು ಆರೋಪಿಸಿದರು.
ವಕ್ಫ್‌ಗೆ ರೈತರ ಜಮೀನು ನೀಡಿದ ತಹಶೀಲ್ದಾರ್ ಮತ್ತು ಅಧಿಕಾರಿಗಳು ವಕ್ಫ್‌ಗೆ ತಮ್ಮ ಮನೆ, ಜಮೀನನ್ನು ಹೀಗೆ ಪರಿವರ್ತಿಸಿ ಕೊಡಲಿ ನೋಡೋಣ!? ಎಂದು ಸಚಿವ ಪ್ರಲ್ಹಾದ ಜೋಶಿ ಕಿಡಿಕಾರಿದರು.

Previous articleಸಂಶಯಾಸ್ಪದ ಸಾವು: ಮೃತನ ಸಹೋದರ ಪೊಲೀಸ್ ವಶಕ್ಕೆ
Next articleವಿದ್ಯಾರ್ಥಿನಿ ಆತ್ಮಹತ್ಯೆ