ರಾಜ್ಯದಲ್ಲಿ ತುಘಲಕ್ ದರ್ಬಾರ್

ಬೆಳಗಾವಿ: ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಅರ್ಥವಿಲ್ಲ. ಜನರನ್ನು ತೃಪ್ತಿ ಪಡಿಸಲು ಘೋಷಣೆ ಮಾಡಿದ್ದರು, ಆದರೆ ಅವುಗಳಲ್ಲಿ ಯಾವುದೂ ಕಾರ್ಯರೂಪಕ್ಕೆ ತರುತ್ತಿಲ್ಲ. ಒಂದು ರೀತಿ ತುಘಲಕ್ ದರ್ಬಾರ್ ನಡೆದಿದೆ. ಒಂದು ದಿವಸ ಮಾಡ್ತಾರೆ ಮಾಡಲಿ ಎನ್ನುವ ಮೂಲಕ ರಾಜ್ಯ ಸರ್ಕಾರದ ವಿರುದ್ಧ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಾಗ್ದಾಳಿ ಮಾಡಿದರು.
ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ ಬೆಳಿಗ್ಗೆ ಸುದ್ದಿಗಾರರ ಜತೆ ಮಾತನಾಡಿದ ಅವರು, ಬೆಳಗಾವಿಗೆ ವಿಶೇಷ ಕಾರ್ಯಕ್ರಮಕ್ಕೆ ಬಂದಿದ್ದೇನೆ. ನಾವೆಲ್ಲಾ ಕುಟುಂಬದವರು ಹೋಗುತ್ತಿದ್ದೇವೆ. ಮಧ್ಯಾಹ್ನದ ಮೇಲೆ ಬೆಂಗಳೂರಿಗೆ ವಾಪಸ್ಸು ಹೋಗುತ್ತೇವೆ. ಸದ್ಯಕ್ಕೆ ವಾತಾವರಣ ಬಿಜೆಪಿ ಪರವಾಗಿ ತುಂಬಾ ಚೆನ್ನಾಗಿದೆ. ಬರುವ ದಿನಗಳಲ್ಲಿ ನೂರಕ್ಕೆ ನೂರು ನಾವು ಮತ್ತೆ ಅಧಿಕಾರಕ್ಕೆ ಬರುತ್ತೇನೆ ಎನ್ನುವ ವಿಶ್ವಾಸವಿದೆ. ಆ ದಿಕ್ಕಿನಲ್ಲಿ ನಾವೆಲ್ಲಾ ಒಟ್ಟಾಗಿ ಸೇರಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇವೆ ಎಂದರು.
ನಿಮ್ಮ ಬಿಜೆಪಿ ನಾಯಕರಿಗೆ ನೀವು ಏನಾದರೂ ಸಲಹೆ ಕೊಡುತ್ತೀರಾ? ಎಂಬ ಮಾದ್ಯಮಗಳ ಪ್ರಶ್ನೆಗೆ ಸಲಹೆ ಕೊಡುವ ಪ್ರಶ್ನೆಯೇ ಇಲ್ಲ. ಎಲ್ಲರೂ ಒಟ್ಟಾಗಿ ಕೆಲಸ ಮಾಡುವುದಷ್ಟೇ ಎಂದು ಯಡಿಯೂರಪ್ಪ ಹೇಳಿದರು. ಉತ್ತರ ಕರ್ನಾಟಕ ಭಾಗಕ್ಕೆ ಯಡಿಯೂರಪ್ಪನವರು ಕೊಟ್ಟಷ್ಟು ಪ್ರಾಮುಖ್ಯತೆ ಈಗಿನ ಸರ್ಕಾರ ಕೊಟ್ಟಿಲ್ಲ ಎಂಬ ವಿಚಾರಕ್ಕೆ ಇದು ಎಲ್ಲರಿಗೂ ಗೊತ್ತಿರುವ ಸಂಗತಿ ಎಂದ ಅವರು, ಯತ್ನಾಳ ಬಗ್ಗೆ ಮಾದ್ಯಮಗಳ ಪ್ರಶ್ನೆ ಕೇಳುತ್ತಿದ್ದಂತೆ ಯಡಿಯೂರಪ್ಪನವರು ಮೌನವಾದರು.
ಗುತ್ತಿಗೆಯಲ್ಲಿ ಮುಸ್ಲೀಮರಿಗೆ ಮೀಸಲಾತಿ ನೀಡುವುದು ಸರಿಯಲ್ಲ; ಸುಪ್ರೀಂ ಕೋರ್ಟು ಈಗಾಗಲೇ ಈ ಬಗ್ಗೆ ಹೇಳಿದೆ. ಹಾಗಾಗಿ ಜನರಿಗೂ ಕೂಡಾ ಈ ವಿಚಾರದಲ್ಲಿ ಖುಷಿ ಇಲ್ಲ. ಸುಪ್ರೀಂ ಕೋರ್ಟು ಇದನ್ನು ನೋಡಿಕೊಳ್ಳಲಿದೆ ಎಂದು ಬಿ.ಎಸ್. ವೈ ಅವರು ಅಭಿಪ್ರಾಯಪಟ್ಟರು.