ಮಂಗಳೂರು: ಕೇಂದ್ರ ಸರ್ಕಾರದ ಗ್ರಾಮ ಸಡಕ್‌ಗೆ ಸರಿಸಾಟಿಯಾಗಿ ರಾಜ್ಯ ಸರ್ಕಾರದಿಂದ ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ‘ಪ್ರಗತಿ ಪಥ’ ಹಾಗೂ ‘ಕಲ್ಯಾಣ ಪಥ’ ಎಂಬ ಹೊಸ ಯೋಜನೆ ಜಾರಿಗೆ ಬರಲಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿರಾಜ್ ಸಚಿವ
ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ನೇತೃತ್ವದ ಗ್ರಾಮ ಸ್ವರಾಜ್ ಪ್ರತಿಷ್ಠಾನದಿಂದ ಮಂಗಳೂರು ಹೊರವಲಯದ ಅಡ್ಯಾರಿನ ಸಹ್ಯಾದ್ರಿ ಕ್ಯಾಂಪಸ್‌ನಲ್ಲಿ ಶನಿವಾರ ಸ್ಥಳೀಯಾಡಳಿತ ಸಂಭ್ರಮ ‘ಹೊಂಬೆಳಕು-2025’ಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಉತ್ತರ ಕರ್ನಾಟಕದಲ್ಲಿ ‘ಕಲ್ಯಾಣ ಪಥ’ ಹೆಸರಿನಲ್ಲಿ ಈ ಯೋಜನೆ ಕಾರ್ಯಗತಗೊಳ್ಳಲಿದ್ದು, ಮಾರ್ಚ್ 1 ರಂದು ಸಿಎಂ ಸಿದ್ದರಾಮಯ್ಯ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಚಾಲನೆ ನೀಡಲಿದ್ದಾರೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯ್ತಿರಾಜ್ ಸಚಿವ
ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಕೇಂದ್ರದ ಗ್ರಾಮ ಸಡಕ್‌ಗಿಂತ ಉತ್ತಮವಾಗಿ ಪ್ರಗತಿ ಪಥ ಹಾಗೂ ಕಲ್ಯಾಣ ಪಥ ಯೋಜನೆಗಳು ಕಾರ್ಯನಿರ್ವಹಿಸಲಿವೆ. ಪ್ರಗತಿ ಪಥದಲ್ಲಿ ರಾಜ್ಯದ 7,110 ಕಿ.ಮೀ. ಗ್ರಾಮೀಣ ರಸ್ತೆಗಳನ್ನು 5,190 ಕೋಟಿ ರು. ವೆಚ್ಚದಲ್ಲಿ ಹಾಗೂ ಕಲ್ಯಾಣ ಪಥದಡಿ 1,150 ಕಿ.ಮೀ. ರಸ್ತೆಗಳನ್ನು 1 ಸಾವಿರ ಕೋಟಿ ರು.ಗಳಲ್ಲಿ ಅಭಿವೃದ್ಧಿಪಡಿಸಲಾಗುವುದು ಎಂದರು. ಪ್ರಾಕೃತಿಕ ಹಾನಿಗೆ ಸಂಬಹಂಧಿಸಿ 189 ಅಸೆಂಬ್ಲಿ ಕ್ಷೇತ್ರಗಳಿಗೆ 1,890 ಕೋಟಿ ರು. ಬಿಡುಗಡೆಗೊಳಿಸಲಾಗಿದ್ದು, ಪ್ರತಿ ಕ್ಷೇತ್ರಕ್ಕೆ ತಲಾ 10 ಕೋಟಿ ರು. ಮಂಜೂರುಗೊಳಿಸಲಾಗಿದೆ. ಈಗಾಗಲೇ ಕಾಮಗಾರಿ ಶುರು ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.
ಅರಿವು ಯೋಜನೆ: ಅರಿವೇ ಗುರು, ಬಸವ ಹಾಗೂ ಬುದ್ಧ ತತ್ವದಡಿ ಸರ್ಕಾರ ಆಡಳಿತ ನಡೆಸುತ್ತಿದ್ದು, ಅರಿವು ಕೇಂದ್ರಕ್ಕೆ 5,770 ಕೋಟಿ ರು. ನೀಡಲಾಗಿದ್ದು, ಇದರಡಿ 51 ಲಕ್ಷ ಬಡ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದಾರೆ. ಇದರಡಿಯಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ಸಿದ್ಧತೆ ನಡೆಸುತ್ತಿದ್ದಾರೆ. ಸ್ವಚ್ಛ ಭಾರತ ಯೋಜನೆಯಡಿ ಕರಾವಳಿ ಜಿಲ್ಲೆ ಉತ್ತಮ ಸ್ಥಾನ ಪಡೆದಿದೆ. 5,212 ಸ್ವಚ್ಛ ಘಟಕಗಳನ್ನು ರಚಿಸಿದ್ದು, ಪ್ರತಿ ಘಟಕಕ್ಕೆ 2 ಕೋಟಿ ರು. ವೆಚ್ಚ ಮಾಡಲಾಗಿದೆ. ತೆರಿಗೆ ಸಂಗ್ರಹ ಯೋಜನೆಯಡಿ ಗ್ರಾಮ ಪಂಚಾಯ್ತಿಗಳಿಂದ 1.10
ಕೋಟಿ ರು. ಸಂಗ್ರಹವಾಗಿದ್ದು, ಆ ಮೊತ್ತವನ್ನು ವಾಪಸ್ ಪಂಚಾಯ್ತಿಗಳ ಅಭಿವೃದ್ಧಿಗೆ ಬಿಡುಗಡೆ ಮಾಡಲಾಗುತ್ತದೆ ಎಂದರು.
ಉದ್ಯೋಗ ಖಾತರಿ ಯೋಜನೆ ಜಾರಿಗೆ ಬಂದು 20 ವರ್ಷ ಸಂದಿದ್ದು, ಪ್ರಸಕ್ತ ರಾಜ್ಯದಲ್ಲಿ 13 ಕೋಟಿ ಮಾನವ ದಿನಗಳನ್ನು ಸೃಷ್ಟಿ ಮಾಡುವ ಗುರಿ ಹೊಂದಿದೆ. ಈವರೆಗೆ 47 ಲಕ್ಷ ಮಂದಿ ಇದರ ಲಾಭ ಪಡೆದಿದ್ದಾರೆ. 27 ಲಕ್ಷ ಕುಟುಂಬಕ್ಕೆ ಆಶ್ರಯ ಲಭಿಸಿದ್ದು, 14.66 ಲಕ್ಷ
ಕಾಮಗಾರಿ ನಡೆದಿದೆ ಎಂದರು. ಹೆಣ್ಮಕ್ಕಳ ಉದ್ಯೋಗಕ್ಕೆ ಕನಸಿನ ಮನೆ ಯೋಜನೆ ಜಾರಿಗೊಳಿಸಿದ್ದು, 3,867 ಕನಸಿನ ಮನೆಗಳು ನಡೆಯುತ್ತಿದೆ. 47,788 ಮಕ್ಕಳು ನೋಂದಣಿ ಮಾಡಿದ್ದು, ಕನಸಿನ ಮನೆಯಲ್ಲಿ ಮಕ್ಕಳ ಪೋಷಣೆ ನಡೆಯುತ್ತಿದೆ. ಅಮ್ಮಂದಿರು ಉದ್ಯೋಗ
ಖಾತರಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಇಷ್ಟೆಲ್ಲ ಸಾಧನೆ ಇದ್ದರೂ ವಿಪಕ್ಷಗಳು ಸರ್ಕಾರದಲ್ಲಿ ದುಡ್ಡು ಇಲ್ಲ ಎಂದು ಅಪಪ್ರಚಾರ ನಡೆಸುತ್ತಿವೆ ಎಂದು ಅವರು ಖೇದ ವ್ಯಕ್ತಪಡಿಸಿದರು.
ಪಂಚಾಯ್ತಿಗಳು ಸ್ಪಂದನೆ, ಸಮನ್ವಯತೆ, ಸಮಯಪ್ರಜ್ಞೆ, ಪರಿಣಾಮಕಾರಿ ಅನುಷ್ಠಾನ ಹಾಗೂ ಹೊಣೆಗಾರಿಕೆ ಈ ಪಂಚ ಸೂತ್ರಗಳಡಿ ಕಾರ್ಯನಿರ್ವಹಿಸಿ ಬದಲಾವಣೆ ತರಬೇಕು. ಪಂಚಾಯ್ತಿಗಳಿಗೆ ಸಂವಿಧಾನ ಅಧಿಕಾರ ನೀಡಿದೆ. ಅವನ್ನು ಪರಿಣಾಮಕಾರಿಯಾಗಿ
ಕಾರ್ಯರೂಪಕ್ಕೆ ತರಬೇಕು ಎಂದರು.
ಪೌರಾಡಳಿತ ಮತ್ತು ಹಜ್ ಸಚಿವ ರಹೀಂ ಖಾನ್ ಮಾತನಾಡಿ, ಸ್ಥಳೀಯಾಡಳಿತಗಳಲ್ಲಿ 40 ವರ್ಷಗಳಿಂದ ಇದ್ದ ಸಮಸ್ಯೆ ಹೋಗಲಾಡಿಸಿ ಇ-ಖಾತಾ ಬಿ-ಖಾತಾ ನೀಡಲು ಕ್ರಮ ಕೈಗೊಳ್ಳಲಾಗಿದೆ. ಮಧ್ಯವರ್ತಿಗಳು ಇಲ್ಲದೆ ಆಂದೋಲನ ಮಾದರಿಯಲ್ಲಿ ಇ ಖಾತೆ ನೀಡಲು
ಸೂಚನೆ ನೀಡಲಾಗಿದೆ ಎಂದರು.