ಹುಬ್ಬಳ್ಳಿ: ರಾಜ್ಯದಲ್ಲಿ ಅರಾಜಕತೆ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಡಳಿತದ ಮೇಲೆ ಬೀಗಿ ಕಳೆದುಕೊಂಡಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಬೆಳಗಾವಿ ಸಂಸದ ಜಗದೀಶ ಶೆಟ್ಟರ ಆರೋಪಿಸಿದರು.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗ್ಯಾರಂಟಿ ಯೋಜನೆಗಳ ಹೆಸರನಲ್ಲಿ ಮತ್ತೆ ಸಾಲ ಪಡೆಯಲು ಮುಂದಾಗಿದ್ದಾರೆ. ಸಾಲದ ಸುಳಿಯಲ್ಲೇ ಸಾರಿಗೆ ಸಂಸ್ಥೆಗಳು ನಡೆಯುತ್ತಿವೆ. ಶಕ್ತಿ ಯೋಜನೆಯಿಂದ ನಾಲ್ಕೂ ಸಾರಿಗೆ ಸಂಸ್ಥೆಗಳು ನಷ್ಟದಲ್ಲಿವೆ ಎಂದು ಕಿಡಿಕಾರಿದರು.
ಸಿದ್ದರಾಮಯ್ಯ, ಭ್ರಷ್ಟಾಚಾರ ರಹಿತ ಸರ್ಕಾರ ನೀಡುತ್ತೇವೆ ಎಂದಿದ್ದರು. ಆದರೆ, ಇಂದು ಅವರೇ ಭ್ರಷ್ಟಾಚಾರದ ಆರೋಪದಲ್ಲಿ ಸಿಲುಕಿದ್ದಾರೆ. ಆದ್ದರಿಂದ ಭ್ರಷ್ಟಾಚಾರ ನಿರ್ಮೂಲನೆ ಮಾಡುವ ಮನಸ್ಥಿತಿ ಸಿದ್ದರಾಮಯ್ಯಗೆ ಇಲ್ಲ. ಇದೇ ಕಾರಣಕ್ಕೆ ಅಧಿಕಾರಿಗಳು, ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೆಳಗಾವಿ ತಹಶೀಲ್ದಾರ್ ಕಚೇರಿಯ ಸಿಬ್ಬಂದಿ ಆತ್ಮಹತ್ಯೆ ಪ್ರಕರಣದಲ್ಲಿ ಎ೧ ಆರೋಪಿ ಮತ್ತೆ ಕೆಲಸಕ್ಕೆ ಹಾಜರು ಆಗಿದ್ದಾನೆ. ಇದು ದಪ್ಪ ಚರ್ಮದ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.
ಪ್ರೀತಿ, ವಿಶ್ವಾಸದಿಂದ ರಸ್ತೆಗೆ ಹೆಸರು ಇಡಬೇಕು. ಒಬ್ಬ ಸಿಎಂ ಹೆಸರನ್ನು ರಸ್ತೆಗೆ ಇಡಬೇಕು ಅಂದಾಗ ವಿರೋಧ ಬರಲೇ ಬಾರದು. ಈ ರೀತಿ ವಿವಾದ ಹುಟ್ಟಿದಾಗ ಸಿಎಂ ಸಿದ್ದರಾಮಯ್ಯ ಬೇಡ ಅನ್ನಬೇಕಿತ್ತು. ಮೈಸೂರು ಅಭಿವೃದ್ಧಿ ಪಡಿಸಿದ್ದು ಮಹರಾಜರು. ಅವರು ಹೆಸರಿನ ರಸ್ತೆ ಬದಲಾವಣೆ ಮಾಡೋದು ಸರಿಯಲ್ಲ ಎಂದು ಕಿಡಿಕಾರಿದರು.