ಅಮೆರಿಕದ ಅಧ್ಯಕ್ಷ ಟ್ರಂಪ್ ದೋಸ್ತಿಗೆ ಬೆಲೆ ಕೊಡುತ್ತಾರೆ ಎಂದು ಮೋದಿ ಭಾವಿಸಿದ್ದರೆ ಅದು ಹುಸಿ ಎಂದು ತಿಳಿಯುವುದಕ್ಕೆ ಹೆಚ್ಚು ದಿನ ಕಾಯಬೇಕಿಲ್ಲ. ಟ್ರಂಪ್ ಮತ್ತು ಮೋದಿಗೆ ಇನ್ನೂ 4 ವರ್ಷ ಅಧಿಕಾರ ಇದೆ. ಟ್ರಂಪ್ ಅಧಿಕಾರಕ್ಕೆ ಬರುವ ಮೊದಲೇ ಎಲ್ಲ ಲೆಕ್ಕ ಹಾಕಿ ಬಂದಿದ್ದಾರೆ. ಅವರು ತಮ್ಮ ನಿಲುವನ್ನು ಬದಲಿಸುವುದಿಲ್ಲ. ಅಕ್ರಮ ವಲಸೆಗಾರರನ್ನು ಹೊರಗೆ ಹಾಕುವುದರಿಂದ ಹಿಡಿದು ಸುಂಕಸಮರ ಸಾರುವವರೆಗೆ ಅವರು ಮೆದು ಧೋರಣೆ ತೋರುವ ಲಕ್ಷಣಗಳು ಕಂಡು ಬರುತ್ತಿಲ್ಲ. ಪಾಡ್‌ಕಾಸ್ಟ್‌ನಲ್ಲಿ ಮೋದಿ ಅಮೆರಿಕದ ಅಧ್ಯಕ್ಷರನ್ನು ಹೊಗಳಿ ಅಟ್ಟಕ್ಕೇರಿಸಿದ್ದಾರೆ. ಅದರಿಂದ ಪ್ರಯೋಜನವೇನೂ ಆಗೋಲ್ಲ. ರಾಜತಾಂತ್ರಿಕ ವ್ಯವಹಾರಗಳಲ್ಲಿ ಇವು ಕೆಲಸ ಮಾಡುವುದಿಲ್ಲ. ಈಗ ಟ್ರಂಪ್ ಹಾಕಿದ ದಾರಿಯಲ್ಲೇ ಮುಂದಿನ ಅಮೆರಿಕ ಸರ್ಕಾರ ನಡೆದುಕೊಳ್ಳುತ್ತದೆ ಎಂಬ ಗ್ಯಾರಂಟಿ ಏನೂ ಇಲ್ಲ. ಟ್ರಂಪ್ ಕೂಡ ಇದೇರೀತಿ ಇರುತ್ತಾರೆ ಎಂದು ಹೇಳಲು ಬರುವುದಿಲ್ಲ. ಅಮೆರಿಕಕ್ಕೆ ಟ್ರಂಪ್‌ನಿಂದ ಒಳ್ಳೆಯದಾಗುತ್ತದೆ ಎಂದು ಅಲ್ಲಿಯ ಜನ ಭಾವಿಸಿದ್ದಾರೆ. ಈಗಿನ ಧೋರಣೆಯಲ್ಲೇ ಟ್ರಂಪ್ ಮುಂದುವರಿದಲ್ಲಿ ಭಾರತಕ್ಕೆ ಅನುಕೂಲವೇನೂ ಆಗುವುದಿಲ್ಲ. ೭ ಲಕ್ಷ ಭಾರತೀಯರು ಅಕ್ರಮ ವಲಸೆ ಹೋಗಿರುವುದರಿಂದ ಅವರಿಗೆ ಟ್ರಂಪ್ ರಿಯಾಯಿತಿ ಏನೂ ತೋರಿಸಲಾರ. ಇದೇ ಪರಿಸ್ಥಿತಿ ಗ್ರೀನ್ ಕಾರ್ಡ್ ದಾರರು ಮತ್ತು ಎಚ್೧ಬಿ ವೀಸಾ ಪಡೆದವರಿಗೆ ಇದೆ. ಅಮೆರಿಕ ಆಮದು ಸುಂಕ ಹೆಚ್ಚಿಸುವುದು ಗ್ಯಾರಂಟಿ. ಭಾರತ ತನ್ನ ನಿಲುವುದನ್ನು ಬದಲಿಸುವುದು ಅನಿವಾರ್ಯ. ಅಮೆರಿಕ ಕಂಪನಿಗಳು ಭಾರತದಲ್ಲಿ ಬಂಡ ವಾಳ ಹೂಡಲು ಹಿಂಜರಿದರೆ, ಪನಮಾ ಕಾಲುವೆ, ಗ್ರೀನ್ ಲ್ಯಾಂಡ್ ಅಮೆರಿಕದ ಪಾಲಾದರೆ, ರಷ್ಯಾ ಉಕ್ರೇನ್ ಭಾಗವನ್ನ ತನ್ನದಾಗಿಸಿಕೊಂಡರೆ, ಚೀನಾ ತೈವಾನ್‌ಗೆ ಕೈಹಾಕಿ ಅರುಣಾಚಲ ಪ್ರದೇಶದತ್ತ ಕಣ್ಣು ಹಾಕಿದರೆ ಗತಿ ಏನು? ಈಗ ಕೆನಡಾ, ಫ್ರಾನ್ಸ್, ಬ್ರಿಟನ್, ಡೆನ್ಮಾರ್ಕ್ ಜತೆ ಇರುವ ಭಾರತದ ಸ್ನೇಹ ಹೀಗೆ ಮುಂದುವರಿಯುತ್ತದೆಯೇ? ಆತ್ಮ ನಿರ್ಭರತೆಗಾಗಿ ವಿದೇಶಿ ವಸ್ತುಗಳ ಮೇಲೆ ವಿಧಿಸಿರುವ ಸುಂಕವನ್ನು ಎಷ್ಟು ದಿನ ಮುಂದುವರಿಸಲು ಸಾಧ್ಯ? ಯೂರೋಪ್ ಒಕ್ಕೂಟದಲ್ಲಿ ೨೭ ದೇಶಗಳಿವೆ. ಅವುಗಳು ಟ್ರಂಪ್ ನೀತಿಯನ್ನು ವಿರೋಧಿಸಿವೆ. ಇವುಗಳ ಪರಿಣಾಮ ಏನು ಎಂಬುದು ಸ್ಪಷ್ಟಗೊಂಡಿಲ್ಲ. ಇವುಗಳ ನಡುವೆ ಮೋದಿ ಸ್ನೇಹ ಎಲ್ಲಿ ನಿಲ್ಲುತ್ತದೆ. ಕೆನಡಾ ದೇಶವನ್ನು ಸೇರ್ಪಡೆ ಮಾಡಿಕೊಳ್ಳಲು ಅಮೆರಿಕ ಸಿದ್ಧವಾಗಿದೆ. ಅದೇರೀತಿ ಗ್ರೀನ್‌ಲ್ಯಾಂಡ್‌ಗೆ ಅಮೆರಿಕ ಒಕ್ಕೂಟ ಸೇರಲು ಆಹ್ವಾನ ನೀಡಲಾಗಿದೆ. ಉಕ್ರೇನ್‌ನಲ್ಲಿರುವ ಅಪರೂಪದ ಖನಿಜಗಳ ಮೇಲೆ ಟ್ರಂಪ್ ಕಣ್ಣು ಬಿದ್ದಿದೆ. ಗಾಜಾ ಕೂಡ ತನ್ನದಾಗಿಸಿಕೊಳ್ಳಬೇಕು ಎಂಬುದು ಟ್ರಂಪ್ ಆಲೋಚನೆ. ಅದೇರೀತಿ ರಷ್ಯಾ ಕೂಡ ಉಕ್ರೇನ್ ಕಬಳಿಸಲು ಆಲೋಚಿಸಿದೆ. ಅದೇ ರೀತಿ ಜಾರ್ಜಿಯ ಸೇರಿದಂತೆ ಹಲವು ದೇಶಗಳನ್ನು ಸೇರಿಸಿಕೊಳ್ಳಲು ಯೋಜಿಸಿದೆ. ಚೀನಾ ಕೂಡ ಭಾರತದ ಕೆಲವು ಭಾಗಗಳ ಮೇಲೆ ಕಣ್ಣಿಟ್ಟಿದೆ. ಅದೇ ರೀತಿ ಬ್ರಿಕ್ಸ್, ಕ್ವಾಡ್ ಸಂಸ್ಥೆಗಳನ್ನು ದುರ್ಬಲಗೊಳಿಸಲು ಭಾರತಕ್ಕೆ ಅಮೆರಿಕ ಒತ್ತಡ ಹೇರಬಹುದು. ಜರ್ಮನಿ ಮತ್ತು ಫ್ರಾನ್ಸ್ ದೇಶಗಳು ಅಮೆರಿಕದ ನೀತಿಯಿಂದ ಸದ್ದಿಲ್ಲದೆ ದೂರ ಸರಿಯಲು ಕ್ರಮ ಕೈಗೊಂಡಿದೆ.
ಮೊದಲ ಪ್ರಜಾಪ್ರಭುತ್ವ ಆರಂಭವಾಗಿದ್ದೇ ೧೨೧೫ ರಲ್ಲಿ. ಮ್ಯಾಗ್ನಾಕಾರ್ಟ ಪ್ರಜಾಪ್ರಭುತ್ವದ ಮೂಲಮಂತ್ರ. ಐಸ್‌ಲ್ಯಾಂಡ್‌ನಲ್ಲಿ ಮೊದಲ ಸಂಸತ್ತು ಆರಂಭವಾಯಿತು. ೧೬೦೦ರಲ್ಲಿ ಮೊದಲ ಸಂವಿಧಾನ ರಚನೆಯಾಯಿತು. ಫ್ರಾನ್ಸ್ ತತ್ವಜ್ಞಾನಿ ನ್ಯಾಯಾಂಗದ ಅಧಿಕಾರವನ್ನು ಸಿದ್ಧಪಡಿಸಿದರು. ೧೭೮೯ರಲ್ಲಿ ಸುಪ್ರೀಂ ಕೋರ್ಟ್ ಅಸ್ತಿತ್ವಕ್ಕೆ ಬಂದಿತು. ಅಮೆರಿಕದ ಸಂವಿಧಾನವನ್ನು ಹಲವು ದೇಶಗಳು ಅನುಸರಿಸಿವೆ. ಯುದ್ಧ ಮತ್ತು ಬಡತನ ನಿವಾರಿಸುವುದೇ ಸಂವಿಧಾನದ ಮೂಲ ಗುರಿಯಾಗಿತ್ತು. ಕಳೆದ ೮ ದಶಕಗಳು ಜಗತ್ತು ಶಾಂತಿ ಮತ್ತು ನೆಮ್ಮದಿ ಕಂಡಿತ್ತು. ಆದರೆ ಕಳೆದ ೩ ವರ್ಷಗಳಲ್ಲಿ ಹಲವು ಬದಲಾವಣೆಗಳಾಗಿವೆ. ಜಗತ್ತಿನಲ್ಲಿ ಯುದ್ಧದ ಭೀತಿ ತಲೆದೋರಿದೆ. ಅಮೆರಿಕದ ಅಧ್ಯಕ್ಷರಿಗೆ ಅಪರಿಮಿತ ಅಧಿಕಾರ ಕೇಂದ್ರೀಕೃತಗೊಂಡಿದೆ. ಹಣಕಾಸು ಮತ್ತು ಅಧಿಕಾರ ಎರಡೂ ಅಲ್ಲಿ ಮನೆಮಾಡಿದೆ. ಹೀಗಾಗಿ ಅವರಲ್ಲಿ ಸಾಮ್ರಾಜ್ಯಶಾಹಿ ಧೋರಣೆ ಬೆಳೆಯುವುದು ಸಹಜ.
ಎಲ್ಲ ಅಧ್ಯಕ್ಷರು ಒಂದಲ್ಲ ಮತ್ತೊಂದು ರೀತಿಯಲ್ಲಿ ತಮ್ಮ ದೇಶದ ಗಡಿಯನ್ನು ವಿಸ್ತರಿಸಿಕೊಳ್ಳಲು ಯತ್ನಿಸಿದವರೇ. ಬರಾಕ್ ಒಬಾಮಾ ಕೂಡ ಯುದ್ಧ ನಡೆಸಿದವರೇ. ಈಗ ಟ್ರಂಪ್ ಅಮೆರಿಕ ಸರ್ಕಾರದ ವೆಚ್ಚವನ್ನು ಎಲಾನ್ ಮಸ್ಕ್ ಜತೆ ಕೈಜೋಡಿಸಿ ಕಡಿತಗೊಳಿಸಲು ಹೊರಟಿದ್ದಾರೆ. ಯುಎಸ್ ಯೇಡ್ಸ್ ಸಂಸ್ಥೆ ಮೂಲಕ ವಿವಿಧ ದೇಶಗಳ ಶಿಕ್ಷಣ, ಆರೋಗ್ಯ, ಕ್ಷೇತ್ರಗಳಿಗೆ ನೀಡುತ್ತಿದ್ದ ಎಲ್ಲ ನೆರವನ್ನೂ ಕಡಿತಗೊಳಿಸಿ ಸಿಬ್ಬಂದಿಯನ್ನು ತೆಗೆದು ಹಾಕಲು ಟ್ರಂಪ್ ಕ್ರಮ ಕೈಗೊಂಡಿದ್ದಾರೆ. ವಿಶ್ವಆರೋಗ್ಯ ಸಂಸ್ಥೆಯಿಂದ ಅಮೆರಿಕ ದೂರ ಸರಿದಿದೆ.
ಮುಂದಿನ ದಿನಗಳಲ್ಲಿ ನ್ಯಾಟೊ ಒಕ್ಕೂಟದಿಂದ ಹೊರಬರಬಹುದು. ಇಂಥ ಟ್ರಂಪ್ ಮೋದಿಯ ಸ್ನೇಹಕ್ಕೆ ಬಗ್ಗುವುದು ಕಷ್ಟ. ಮುಂಬರುವ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಬದಲಾವಣೆ ಬರಲಿದೆ. ರಷ್ಯಾ-ಅಮೆರಿಕ-ಚೀನಾ ಯಾವ ರೀತಿ ವರ್ತಿಸುತ್ತದೆ ಎಂಬುದರ ಮೇಲೆ ಯುದ್ಧ-ಶಾಂತಿ ಅವಲಂಬಿಸಿದೆ.