ರಾಜಕೀಯ ಪೂರ್ಣಕಾಲಿಕ ಕೆಲಸವಲ್ಲ, ನಾನು ಯೋಗಿ

0
32

ಲಖನೌ: ಪ್ರಧಾನಿ ನರೇಂದ್ರ ಮೋದಿಯವರ ಸಂಭಾವ್ಯ ನಿವೃತ್ತಿ ಕುರಿತು ತೀವ್ರ ಚರ್ಚೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಜನಬೆಂಬಲ ಹೆಚ್ಚುತ್ತಿದೆ. ಆದರೆ ರಾಜಕೀಯ ನನ್ನ ಪೂರ್ಣಕಾಲಿಕ ಕೆಲಸವಲ್ಲ, ವಾಸ್ತವದಲ್ಲಿ ನಾನೊಬ್ಬ ಯೋಗಿ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ.
ನೋಡಿ, ನಾನು ಈ ರಾಜ್ಯದ ಮುಖ್ಯಮಂತ್ರಿ. ಬಿಜೆಪಿ ಉತ್ತರಪ್ರದೇಶದ ಜನರಿಗಾಗಿ ನನ್ನನ್ನು ಇಲ್ಲಿರಿಸಿದೆ. ಪ್ರಸ್ತುತ ನಾನು ಇಲ್ಲಿ ಕೆಲಸ ಮಾಡುತ್ತಿದ್ದೇನೆ. ವಾಸ್ತವವಾಗಿ ನಾನು ಯೋಗಿ ಎಂದವರು ಪಿಟಿಐಗೆ ನೀಡಿದ ಸಂದರ್ಶನದಲ್ಲಿ ವಿವರಿಸಿದರು.
ರಾಜಕೀಯದಲ್ಲಿ ಎಷ್ಟು ಸಮಯ ಉಳಿಯಲು ಬಯಸಿದ್ದೀರಿ ಎಂದು ಕೇಳಿದಾಗ ಅದಕ್ಕೂ ಒಂದು ಕಾಲಮಿತಿ ಇದೆ ಎಂದು ಉತ್ತರಿಸಿದರು. ರಾಜಕಾರಣ ಶಾಶ್ವತವಾದ ವೃತ್ತಿಯಲ್ಲ ಎಂಬುದು ನಿಮ್ಮ ಮಾತಿನ ಅರ್ಥವೇ ಎಂದು ಪ್ರಶ್ನಿಸಿದಾಗ ಹೌದು, ನಾನು ಇದನ್ನೇ ಹೇಳಿದ್ದು ಎಂದರು. ಧರ್ಮ ಹಾಗೂ ರಾಜಕೀಯ ಕುರಿತು ತಮ್ಮ ಪರಿಕಲ್ಪನೆ ಏನೆಂಬುದನ್ನು ವಿವರಿಸುವಂತೆ ಕೇಳಿದ ಸಂದರ್ಭದಲ್ಲಿ ನಾವು ನಮ್ಮ ಜೀವನವನ್ನು ಧರ್ಮಕ್ಕೆ ಮೀಸಲಿಟ್ಟವರು. ರಾಜಕೀಯವು ಬೆರಳಣಿಕೆ ಜನರಿಗೆ ಸೀಮಿತವಾದುದು. ಹೀಗಾಗಿಯೇ ಸಮಸ್ಯೆ ಉದ್ಭವಿಸಿದೆ ಎಂದರು.
ರಾಜಕಾರಣವು ಸ್ವಾರ್ಥದಿಂದ ಕೂಡಿದ್ದರೆ ಅದು ಸಮಸ್ಯೆಯನ್ನು ಸೃಷ್ಟಿಸುತ್ತದೆ. ಹೆಚ್ಚಿನ ಜನರ ಒಳಿತಿಗಾಗಿದ್ದರೆ ಪರಿಹಾರ ಒದಗಿಸುತ್ತದೆ. ಹೀಗಾಗಿ ನಾವು ಸಮಸ್ಯೆಯ ಭಾಗವಾಗಬೇಕೋ ಅಥವಾ ಪರಿಹಾರದ ಕಡೆ ಸಾಗಬೇಕೋ ಎಂಬುದನ್ನು ಆರಿಸಿಕೊಳ್ಳಬೇಕು. ಧರ್ಮವು ನಮಗೆ ಕಲಿಸುವುದು ಇದನ್ನೇ ಎಂದು ನಾನು ಭಾವಿಸಿದ್ದೇನೆ ಎಂದರು. ಸ್ವಾರ್ಥಕ್ಕಾಗಿ ಧರ್ಮವನ್ನು ಆರಿಸಿಕೊಂಡಾಗ ಅದು ಹೊಸ ಸವಾಲುಗಳನ್ನು ಸೃಷ್ಟಿಸುತ್ತದೆ. ಆದರೂ ಯಾರಾದರೂ ತಮ್ಮನ್ನು ಧರ್ಮದ ಅತ್ಯುನ್ನತ
ಉದ್ದೇಶಕ್ಕಾಗಿ ಸಮರ್ಪಿಸಿಕೊಂಡಾಗ ಅದು ಪ್ರಗತಿಗೆ ಹೊಸ ಮಾರ್ಗವನ್ನು ತೆರೆಯುತ್ತದೆ ಎಂದರು.

Previous articleಭಾರತಕ್ಕೂ ಭೂಕಂಪದ ಭೀತಿ: ತಜ್ಞರಿಂದ ಎಚ್ಚರಿಕೆ
Next articleರಾತ್ರಿ ಮಲಗಿ ಬೆಳಗೆದ್ದರೆ ಯಾವುದರ ಬೆಲೆ ಏರಿಕೆಯಾಗುವುದೋ