ಬೆಂಗಳೂರು: ಆರ್ಥಿಕ ಸಮೀಕ್ಷೆ ವರದಿಯೇ ಕರುನಾಡಿನ ರಸ್ತೆಗಳ ಸ್ಥಿತಿಗೆ ಕನ್ನಡಿ ಹಿಡಿದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ, ರಾಜ್ಯದ ಅಭಿವೃದ್ಧಿಗೆ ಚಪ್ಪಡಿ ಕಲ್ಲೆಳೆದು ಬರೀ ಒಂದು ಸಮುದಾಯದ ಓಲೈಕೆ ಬಜೆಟ್ ಮಂಡಿಸಿದ್ದೀರಲ್ಲಾ..ಇಲ್ನೋಡಿ ರಸ್ತೆಗಳು, ವಿಶ್ವವಿದ್ಯಾಲಯಗಳು ಹೇಗೆ ಬಾಯ್ತೆರೆದು ಉಸಿರಾಡುತ್ತಿವೆ!
“ಪ್ರಸ್ತುತದಲ್ಲಿ ದೇಶದ ಉದ್ದಗಲಕ್ಕೂ ಬೃಹತ್ ಮಟ್ಟದಲ್ಲಿ ರಸ್ತೆಗಳ ನಿರ್ಮಾಣವಾಗುತ್ತಿದೆ. ಆದರೆ, ಕರ್ನಾಟಕದ ನಗರ ಪ್ರದೇಶಗಳು ಗಂಭೀರ ನ್ಯೂನತೆಯಿಂದ ಬಳಲುತ್ತಿವೆ”. ತಾವು ಬಜೆಟ್ ಮಂಡಿಸಿದ ಬೆನ್ನಲ್ಲೇ ವಿಧಾನಸಭೆಯಲ್ಲಿ ಮಂಡನೆಯಾದ ಆರ್ಥಿಕ ಸಮೀಕ್ಷೆ ವರದಿಯೇ ಕರುನಾಡಿನ ರಸ್ತೆಗಳ ಸ್ಥಿತಿಗೆ ಕನ್ನಡಿ ಹಿಡಿದಿದೆ. ಹತ್ತಾರು ವಿಶ್ವವಿದ್ಯಾಲಯಗಳೂ ಅಭಿವೃದ್ಧಿ ಅನುದಾನ ಕಾಣದೆ ಎದುರುಸಿರು ತೆಗೆಯುತ್ತಿವೆ. ವೋಟ್ ಬ್ಯಾಂಕ್ ಗಾಗಿ ರಾಜ್ಯದ ಜನರ ಹಿತ ಬಲಿ ಕೊಟ್ಟಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.