ಯುದ್ಧೋನ್ಮಾದ ತರವಲ್ಲ ಸಾವು ನೋವು ಕೊನೆಯಾಗಲಿ

0
11

ಇಸ್ರೇಲ್- ಪ್ಯಾಲೆಸ್ತೀನ್ ಯುದ್ಧೋನ್ಮಾದದಲ್ಲಿ ಸಂತೋಷ ಕಾಣುವುದು ವಿಕಾರ ಮನೋಭಾವವೇ ಹೊರತು ನಾಗರೀಕತೆಯಲ್ಲ. ಯುದ್ಧದಲ್ಲಿ ಎಲ್ಲರೂ ಸಮಾನ ದುಖಿಃಗಳು. ಅಮಾಯಕ ಜನರೇ ಬಲಿಪಶು.

ರಷ್ಯಾ- ಉಕ್ರೇನ್ ಬಳಿಕ ಇಸ್ರೇಲ್- ಹಮಾಸ್ ಯುದ್ಧ ಆರಂಭಗೊಂಡಿದೆ. ಎಲ್ಲ ಯುದ್ಧಗಳಲ್ಲಿ ಅಮಾಯಕರೇ ಬಲಿಯಾಗುತ್ತಿದ್ದಾರೆ. ಅವರ ನೋವಿಗೆ ಅಂತ್ಯ ಕಂಡು ಬರುತ್ತಿಲ್ಲ. ಮಹಿಳೆಯರು ಮತ್ತು ಮಕ್ಕಳ ಸಾವು ನೋವಿನಲ್ಲೂ ಸಂತೋಷ ಕಾಣುವ ವಿಕಾರ ರೂಪ ಎಲ್ಲ ಕಡೆ ತಲೆಎತ್ತಿದೆ. ಇಸ್ರೇಲ್ ಪರ ಅಮೆರಿಕ ಮತ್ತಿತರ ದೇಶಗಳು, ಪ್ಯಾಲೆಸ್ತೀನರ ಪರ ಅರಬ್ ದೇಶಗಳು ನಿಂತಿರುವುದನ್ನು ನೋಡಿದರೆ ಹಿಂಸೆಯ ವಿಕಟ ಅಟ್ಟಹಾಸ ಸದ್ಯದಲ್ಲಿ ನಿಲ್ಲುವ ಲಕ್ಷಣ ಕಂಡು ಬರುತ್ತಿಲ್ಲ. ಎರಡೂ ಕಡೆಯಲ್ಲಿ ೧೦ ಸಾವಿರಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ. ೨೦ ಲಕ್ಷಕ್ಕೂ ಹೆಚ್ಚು ಮಂದಿನಿರಾಶ್ರಿತರಾಗಿದ್ದಾರೆ. ಇಂಥ ಪರಿಸ್ಥಿತಿ ಯುದ್ಧ ನಿಲ್ಲಿಸುವಂತೆ ಮನವಿ ಮಾಡುವ ಧ್ವನಿ ಪ್ರಬಲವಾಗಿ ಎಲ್ಲೂ ಕೇಳಿಬರುತ್ತಿಲ್ಲ. ವಿಶ್ವಸಂಸ್ಥೆ ಕೂಡ ತಾಳ್ಮೆ ಕಳೆದುಕೊಳ್ಳುತ್ತಿದೆ. ಎಲ್ಲ ದೇಶಗಳೂ ಪರಸ್ಪರ ಆರೋಪ- ಪ್ರತ್ಯಾರೋಪಗಳಲ್ಲಿ ನಿರತವಾಗಿರುವುದು ನಿಜಕ್ಕೂ ದುರ್ದೈವ. ಇದುವರೆಗೆ ಆಗಿರುವ ಎಲ್ಲ ಯುದ್ಧಗಳ ಇತಿಹಾಸ ನೋಡಿದರೆ ಎಲ್ಲರೂ ಸೋತವರೇ ಹೊರತು ಗೆದ್ದವರು ಯಾರೂ ಇಲ್ಲ. ಆದರೂ ಇಸ್ರೇಲ್- ಹಮಾಸ್ ಯುದ್ಧವನ್ನು ಸಮರ್ಥಿಸುವವರು ಬಹಳ ಜನ ಇದ್ದಾರೆ. ಮತ್ತೆ ಕೆಲವರು ಯುದ್ಧವನ್ನು ಕ್ರಿಕೆಟ್ ಪಂದ್ಯ ನೋಡಿದಂತೆ ಸಾವಿನ ಸಂಖ್ಯೆಯನ್ನು ವೀಕ್ಷಿಸುತ್ತಿದ್ದಾರೆ ಎಂದರೆ ನಮ್ಮ ವಿವೇಕ ಯಾವ ದಾರಿ ಹಿಡಿದಿದೆ ಎಂಬುದು ತಿಳಿಯುತ್ತದೆ.
ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ಇಂದು ನಿನ್ನೆಯದಲ್ಲ. ಇದು ಆರಂಭವಾಗಿಯೇ ದಶಕಗಳು ಕಳೆದುಹೋಗಿವೆ. ಇಸ್ರೇಲ್ ಪ್ರಧಾನಿ ಯುದ್ಧವನ್ನು ಕೊನೆಗಾಣಿಸುವುದಾಗಿ ಹೇಳಿದ್ದರೂ ಅದು ಅಷ್ಟು ಸುಲಭವಲ್ಲ. ಗೆದ್ದವರು- ಸೋತವರು ಯಾರೂ ಯುದ್ಧ ನಿಲ್ಲಿಸಲು ಬಯಸುವುದಿಲ್ಲ. ವೈರಿಯ ಒಂದು ಕಣ್ಣಾದರೂ ಹೋಗಬೇಕು ಎಂದು ಬಯಸುವವವರೇ ಹೆಚ್ಚು. ಇಸ್ರೇಲ್- ಹಮಾಸ್ ಇಬ್ಬರೂ ದೀರ್ಘಕಾಲಿಕ ಯುದ್ಧಕ್ಕೆ ಸಿದ್ಧತೆ ಮಾಡಿಕೊಂಡಿರುವುದು ಸ್ಪಷ್ಟ. ಇಬ್ಬರೂ ನೆಲಮಾಳಿಗೆ ಜೀವನಕ್ಕೆ ಸಿದ್ಧರಾಗಿದ್ದಾರೆ ಎಂದ ಮೇಲೆ ಹೋರಾಟ ಮತ್ತು ಹಿಂಸಾಚಾರ ಸದ್ಯಕ್ಕೆ ನಿಲ್ಲುವ ಲಕ್ಷಣ ಕಂಡು ಬರುತ್ತಿಲ್ಲ. ಇಸ್ರೇಲ್ ಬೇರೆ ರಂಗದಲ್ಲಿ ಮಾಡಿರುವ ಸಾಧನೆ ಮೆಚ್ಚುವಂತಹುದು. ಆದರೆ ಈಗ ಯುದ್ಧಕಾಲದಲ್ಲಿ ನಡೆದುಕೊಳ್ಳುತ್ತಿರುವ ರೀತಿ ಯಾರ ಮನಸ್ಸನ್ನೂ ಗೆದ್ದಿಲ್ಲ. ಹಮಾಸ್‌ನ ಹಿಂಸಾಚಾರಕ್ಕೆ ಪ್ರತಿಯಾಗಿ ಇಸ್ರೇಲ್ ನಡೆಸಿದ ಪ್ರತಿದಾಳಿ ಅಮಾನುಷ. ಎಲ್ಲ ದೇಶಗಳ ಟಿವಿ ಚಾನೆಲ್‌ಗಳು ಯುದ್ಧವನ್ನು ಮನರಂಜನೆಯ ವಸ್ತುವಾಗಿ ನೋಡುತ್ತಿವೆ. ಸಾವೊಂದೇ ಮನುಷ್ಯನನ್ನು ಮೆತ್ತಗಾಗಿಸುತ್ತದೆ. ಏಕೆಂದರೆ ಸಾವನ್ನು ಗೆದ್ದವರು ಯಾರೂ ಇಲ್ಲ. ಒಣಪ್ರತಿಷ್ಠೆಗಳು ಎಲ್ಲ ದೇಶಗಳನ್ನೂ ಕಾಡುತ್ತಿವೆ. ಕೊರೊನಾ ಕಾಲದಲ್ಲಿ ಕುಸಿದ ಆರ್ಥಿಕತೆ ಚೇತರಿಕೆಯ ಹಾದಿಯಲ್ಲಿರುವಾಗಲೇ ಯುದ್ಧಗಳು ಆರಂಭಗೊಂಡವು. ಎಲ್ಲ ಪ್ರಮುಖ ದೇಶಗಳು ಸಮರೋದ್ಯಮವನ್ನು ಬೃಹತ್ ಪ್ರಮಾಣದಲ್ಲಿ ಕೈಗೊಂಡಿರುವುದರಿಂದ ಯುದ್ಧ ನಡೆದರೆ ಮಾತ್ರ ಅವರ ಶಸ್ತ್ರಾಸ್ತಗಳಿಗೆ ಬೇಡಿಕೆ ಅಧಿಕಗೊಳ್ಳುತ್ತದೆ. ಕುಡಿಯಲು ನೀರಿಲ್ಲದಿದ್ದರೂ ಹೋರಾಟಕ್ಕೆ ಬಂದೂಕು ಬೇಕೇ ಬೇಕು. ಇಂಥ ವಾತಾವರಣ ಸೃಷ್ಟಿಯಾಗಲು ಪ್ರಬಲ ದೇಶಗಳ ಕುಮ್ಮಕ್ಕು ಕಾರಣ. ಬಂದೂಕು ಹಿಡಿದ ಯಾವ ದೇಶವೂ ಉದ್ದಾರವಾಗಿಲ್ಲ. ಹಿಂಸೆ, ಅತ್ಯಾಚಾರಕ್ಕೆ ಬೆಂಬಲ ನೀಡುವ ಜನ ಎಂದೂ ನಾಗರೀಕರಾಗುವುದಿಲ್ಲ. ನಮ್ಮಲ್ಲೂ ಕೆಲವರು ಯುದ್ಧೋನ್ಮಾದಿಂದ ವರ್ತಿಸುತ್ತಿದ್ದಾರೆ. ಇಸ್ರೇಲ್ ಕ್ರಮವನ್ನು ಸಮರ್ಥಿಸುವವರೂ ಇದ್ದಾರೆ. ಇದೆಲ್ಲವೂ ದೂರದಿಂದ ನೋಡುವುದಕ್ಕೆ ಚೆನ್ನಾಗಿ ಕಾಣುತ್ತದೆ. ಸಾವು-ನೋವು ಅನುಭವಿಸಿದವರಿಗೆ ಮಾತ್ರ ಅದರ ಕಷ್ಟ ತಿಳಿಯುತ್ತದೆ. ಸುದೈವದಿಂದ ನಮಗೆ ಯುದ್ಧವಿಲ್ಲದೆ ಸ್ವಾತಂತ್ರ್ಯ ಸಿಕ್ಕಿತು. ಅಲ್ಲದೆ ನಮ್ಮ ನೆಲದಲ್ಲಿ ನಾವು ತಲೆತಲಾಂತರದಿಂದ ವಾಸಿಸುತ್ತಿದ್ದರಿಂದ ಹೊರಗಿನಿಂದ ಬಂದವರು ನಮ್ಮ ಭೂಮಿಯನ್ನು ನಮಗೇ ಬಿಟ್ಟು ಹೋದರು. ಪಾಕ್ ನೊಂದಿಗೆ ನಮಗೆ ಭಿನ್ನಾಭಿಪ್ರಾಯವಿದ್ದರೂ ಅವರಿಗೆ ಸಾವು-ನೋವು ತರಲು ಬಯಸುವುದಿಲ್ಲ. ಇಸ್ರೇಲ್- ಪ್ಯಾಲೆಸ್ತೀನ್ ಪರಿಸ್ಥಿತಿಯೇ ಬೇರೆ. ಭಾರತ-ಪಾಕ್ ಚಿತ್ರಣವೇ ಬೇರೆ.

Previous articleಯೋಗಿ ಆದಿತ್ಯನಾಥ್ ಭೇಟಿಯಾದ ನಿಖಿಲ್ ಕುಮಾರಸ್ವಾಮಿ
Next articleಪ್ಯಾರಾ ಏಷ್ಯನ್​ ಗೇಮ್ಸ್​: ಪದಕ ಗಳಿಕೆಯಲ್ಲಿ ಭಾರತ ಶತಕ