ನಾಮ ಹಾಕಿಕೊಂಡು ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ ಮಾತ್ರಕ್ಕೆ ಹಿಂದೂ ಆಗುವುದಿಲ್ಲ
ಮಂಡ್ಯ: ಹಿಂದುತ್ವದಲ್ಲಿ ಒಂದು ಶಿಸ್ತಿದೆ, ಅನುಶಾಸನ ಇದೆ. ಅನುಶಾಸನ ಇಲ್ಲದಿದ್ದರೆ ಶಿಸ್ತಾಗುವುದಿಲ್ಲ. ಪಕ್ಷದ ಅನುಶಾಸನದಲ್ಲೂ ಇರಬೇಕು, ಹಾದಿ ಬೀದಿಯಲ್ಲಿ ಮಾತನಾಡುವುದು ಹಿಂದುತ್ವದ ಲಕ್ಷಣವಲ್ಲ. ನಾಮ ಹಾಕಿಕೊಂಡು ದೇವಸ್ಥಾನಕ್ಕೆ ಹೋಗಿ ಪೂಜೆ ಸಲ್ಲಿಸಿದ ಮಾತ್ರಕ್ಕೆ ಹಿಂದೂ ಆಗುವುದಿಲ್ಲ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖರಾದ ಕಲ್ಲಡ್ಕ ಪ್ರಭಾಕರ ಭಟ್ ಅವರು ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿಜಯಪುರ ಶಾಸಕ ಹಾಗೂ ಮಾಜಿ ಸಚಿವ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಬಿಜೆಪಿಯಿಂದ ಉಚ್ಚಾಟನೆ ಮಾಡಿರುವುದನ್ನು ಸಮರ್ಥಿಸಿಕೊಂಡರು. ಹಿಂದುತ್ವವಾದಿ ಎಂದು ಏನು ಬೇಕಾದರೂ ಮಾತನಾಡುವುದಲ್ಲ. ಮಾತನಾಡುವಾಗ ಪ್ರಜ್ಞೆ ಇರಬೇಕು. ಮಾತಿನ ಮೇಲೆ ನಿಗಾವಹಿಸಬೇಕು. ಒಂದು ಸಂಘಟನೆಯಲ್ಲಿದ್ದಾಗ ಮಾತು ಗಡಿ ಮೀರಿ ಹೋಗಬಾರದು. ಪಕ್ಷದ ಸಮಿತಿ ಒಳಗೆ ಮಾತನಾಡಬೇಕು. ಬೀದಿಯಲ್ಲಿ ಮಾತನಾಡುವುದು ಹಿಂದುತ್ವದ ಲಕ್ಷಣ ಅಲ್ಲ. ಹಿಂದುತ್ವದಲ್ಲಿ ಶಿಸ್ತು ಇದೆ. ಅದು ಇಲ್ಲದಿದ್ದರೆ ಹಿಂದುತ್ವವಾದಿ ಆಗಲು ಸಾಧ್ಯವಿಲ್ಲ. ಪಕ್ಷದಲ್ಲಿ ಶಿಸ್ತಿನಿಂದ ಇರದಿದ್ದರೆ ಇಂತಹ ಸಮಸ್ಯೆ ಆಗುತ್ತವೆ ಎಂದರು.