ಯತ್ನಾಳ್ ಬೆಂಬಲಿಸಿ ಕೂಡಲಸಂಗಮ ಶ್ರೀ ಹೇಳಿಕೆ: 19, 20ರಂದು ನಿಗದಿಯಾಗಿದ್ದ ಸಭೆ ರದ್ದು

0
8

ದಾವಣಗೆರೆ: ಕೂಡಲಸಂಗಮ ಲಿಂಗಾಯತ ಪಂಚಮಸಾಲಿ ಜಗದ್ಗುರು ಶ್ರೀಬಸವ ಜಯಮೃತ್ಯುಂಜಯ ಸ್ವಾಮೀಜಿ, ಉಚ್ಛಾಟಿತ ಬಿಜೆಪಿ ನಾಯಕ ಬಸನಗೌಡ ಆರ್.ಪಾಟೀಲ್ ಯತ್ನಾಳ್ ಪರವಾಗಿ ಬಹಿರಂಗವಾಗಿ ಬೆಂಬಲ ನೀಡಿದ ಸಂಬಂಧ ನಿಗದಿಗೊಳಿಸಿದ ಏ. 19 ಮತ್ತು 20ರ ಸಭೆಗಳು ರದ್ದುಗೊಂಡಿವೆ ಎಂದು ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಮಹಾಪ್ರಧಾನ ಕಾರ್ಯದರ್ಶಿ ಎಚ್.ಎಸ್. ಶಿವಶಂಕರ್ ತಿಳಿಸಿದರು.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯತ್ನಾಳ್‌ಗೆ ಬೆಂಬಲ ನೀಡಿದ ಕೂಡಲಸಂಗಮದ ಸ್ವಾಮೀಜಿ ಬದಲಿಸಬೇಕೆಂದು ಹುಬ್ಬಳ್ಳಿಯಲ್ಲಿ ಲಿಂಗಾಯತ ಪಂಚಮಸಾಲಿ ಸಮಾಜದ ರಾಷ್ಟ್ರೀಯ ಅಧ್ಯಕ್ಷ ವಿಜಯಾನಂದ ಎಸ್. ಕಾಶಪ್ಪನವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಶೀಘ್ರವೇ ನಿಲುವು ತೆಗೆದುಕೊಳ್ಳುವ ಬಗ್ಗೆ ಚರ್ಚೆ ನಡೆದಿತ್ತು. ಈ ಹಿನ್ನೆಲೆಯಲ್ಲಿ ಕೂಡಲಸಂಗಮದಲ್ಲಿ ಏ. 20ರಂದು ಸ್ವಾಮೀಜಿ ಸಭೆ ನಡೆಸಲು ತೀರ್ಮಾನಿಸುತ್ತಿದ್ದಂತೆ ವಿಜಯಾನಂದ ಕಾಶಪ್ಪನವರು ಏ. 19ರಂದು ಸಭೆ ನಡೆಸಲು ಮುಂದಾದರು. ಇದು ಸಮಾಜ ಬಾಂಧವರು ಮತ್ತು ನಾಯಕರಲ್ಲಿ ಗೊಂದಲ ಸೃಷ್ಟಿ ಆಗಿ ಸಮಾಜ ಸಂಘಟನೆಗೆ ಪೆಟ್ಟು ಬೀಳುತ್ತದೆ ಎಂಬ ಉದ್ದೇಶದಿಂದ ಈ ಎರಡು ಸಭೆಗಳನ್ನು ರದ್ದುಗೊಳಿಸಿದ್ದೇವೆ ಎಂದು ಮಾಹಿತಿ ನೀಡಿದರು.
ಕೂಡಲಸಂಗಮದ ಸ್ವಾಮೀಜಿ, ಸಮಾಜದ ಒಬ್ಬ ನಾಯಕನಿಗೆ ಅನ್ಯಾಯ ಆಗುತ್ತಿದೆ ಎಂದು ಅವರ ಪರವಾಗಿ ಬೆಂಬಲಕ್ಕೆ ನಿಂತಿದ್ದು ಸ್ವಾಗತಾರ್ಹ. ಆದರೆ ಸ್ವಾಮೀಜಿ ಖಂಡನೆಯನ್ನೂ ಮಾಡಿದ್ದಾರೆ. ಇವತ್ತು ರಾಷ್ಟ್ರೀಯ ನಾಯಕರಿಗೆ ಎಲ್ಲಾ ಮಠ, ಮಾನ್ಯಗಳು ಬೆಂಬಲಕ್ಕೆ ನಿಲ್ಲುವುದು ಸರ್ವೇ ಸಾಮಾನ್ಯ. ಅವರವರ ಸಮಾಜದ ನಾಯಕರಿಗೆ, ಸಮಾಜ ಬಾಂಧವರಿಗೆ ಕಷ್ಟಗಳು ಬಂದಾಗ ಅವರ ಬೆಂಬಲಕ್ಕೆ ನಿಲ್ಲುತ್ತಾರೆ. ಅದೇ ರೀತಿ ಸ್ವಾಮೀಜಿ ಅವರು ಯತ್ನಾಳ್ ಪರವಾಗಿ ನಿಂತಿದ್ದಾರೆ ಎಂದು ಸ್ಪಷ್ಟಪಡಿಸಿದರು.
ಸ್ವಾಮೀಜಿಗಳಾದವರು ಪೀಠ ಕಟ್ಟುವುದಕ್ಕೆ, ಸಮಾಜ ಕಟ್ಟುವುದಕ್ಕೆ, ಸಮಾಜ ಬಾಂಧವರಿಗೆ ಆಗುವ ನೋವುಗಳಲ್ಲಿ ಭಾಗಿಯಾವುದು ಅವರ ಕರ್ತವ್ಯ. ಹೀಗಾಗಿ ಕೂಡಲಸಂಗಮದ ಬಸವಜಯಮೃತ್ಯುಂಜಯ ಸ್ವಾಮೀಜಿ ಅವರ ಬೆಂಬಲಕ್ಕೆ ನಿಂತಿದ್ದಾರೆ. ಆದರೆ ವಿವಿಧ ಪಕ್ಷಗಳಲ್ಲಿರುವ ನಾಯಕರು ಸ್ವಾಮೀಜಿ ನಡೆಯನ್ನು ವಿರೋಧಿಸಿದ್ದಾರೆ. ಇದು ಸಹಜ, ಎಲ್ಲೋ ಒಂದು ಕಡೆ ಸಾಮೀಜಿಯವರು ಬಿಜೆಪಿಯಿಂದ ಉಚ್ಛಾಟಿತ ನಾಯಕರ ಬಗ್ಗೆ ಹೆಚ್ಚು ಹೇಳಿಕೆ ನೀಡಿದ್ದರಿಂದ ಕಾಂಗ್ರೆಸ್‌ನಲ್ಲಿರುವ ಕೆಲವು ನಾಯಕರಲ್ಲಿ ಗೊಂದಲ ಆಗಿದೆ, ಕೆಲವರಿಗೆ ಅಸಮಾಧಾನವೂ ಆಗಿದೆ ಎಂದರು.
ಈ ಬಗ್ಗೆ ಯಾರು ಆತಂಕಪಡುವುದು ಬೇಡ. ಸ್ವಾಮೀಜಿಯವರು ಅವರ ಜವಾಬ್ದಾರಿಯನ್ನು ನಿರ್ವಹಿಸಿದ್ದಾರೆ. ನಿಮಗೆ ಕಷ್ಟ ಬಂದ ಸಂದರ್ಭದಲ್ಲಿ ನಿಮ್ಮ ಪರವಾಗಿಯೂ ನಿಲ್ಲುತ್ತಾರೆ ಎಂದು ಭಾವಿಸೋಣ. ಅದನ್ನು ತಪ್ಪಾಗಿ ಅರ್ಥೈಸಿ ಸ್ವಾಮೀಜಿ ಮೇಲೆ ಯಾರು ಹರಿಹಾಯುವ ಸನ್ನಿವೇಶ ಬೇಡ. ಸ್ವಾಮೀಜಿಗಳು ಸಮಾಜ ಕಟ್ಟುವ ಕೆಲಸ ಮಾಡಿದ್ದಾರೆ. ಕಲ್ಲು, ಮಣ್ಣುಗಳಿಂದ ಕೂಡಿದ ಪೀಠ ಕಟ್ಟಲಿಲ್ಲ, ಹಣ ಸಂಪಾದನೆ ಮಾಡುವ ಉದ್ದೇಶದಿಂದ ಅವರು ಹೆಜ್ಜೆಯನ್ನು ಹಾಕಲಿಲ್ಲ, ಅವರು ಮನಸ್ಸುಗಳನ್ನು ಕಟ್ಟುವ ಕೆಲಸ ಮಾಡಿದರು ಎಂದು ತಿಳಿಸಿದರು.
ಗೋಷ್ಠಿಯಲ್ಲಿ ಪಂಚಮಸಾಲಿ ಸಮಾಜದ ರಾಜ್ಯ ಯುವ ಘಟಕದ ಬಿ.ಜೆ.ಅಜಯ್‌ಕುಮಾರ್, ಬಿ.ಜಿ.ಭರತ್, ಮಯೂರ್ ಇಂಜಿನಿಯರ್, ಆನಂದ ಜಿರಲಿ, ಮುರುಗೇಶ್ ಇನ್ನಿತರರಿದ್ದರು.

ಮುಖಂಡರು ಹೇಳಿಕೆ ನಿಲ್ಲಿಸಿ..
ಬಿಜೆಪಿ ಉಚ್ಚಾಟಿತ ಬಸನಗೌಡ ಪಾಟೀಲ್ ಯತ್ನಾಳ್ ಪರವಾಗಿ ಸ್ವಾಮೀಜಿ ಬೆಂಬಲಿಸಿದ್ದಕ್ಕೆ ಸಾಮಾಜಿಕ ಜಾಲತಾಣ ಮತ್ತು ಪತ್ರಿಕೆಗಳಲ್ಲಿ ಪಂಚಮಸಾಲಿ ಸಮಾಜದ ಮುಖಂಡರ ಗೊಂದಲದ ಹೇಳಿಕೆಗಳನ್ನು ನಾವು ಗಮನಿಸಿದ್ದೇವೆ. ಈ ರೀತಿಯ ಗೊಂದಲ ಹೇಳಿಕೆಗಳನ್ನು ನೀಡುವುದನ್ನು ಸಮಾಜದ ಮುಖಂಡರು ನಿಲ್ಲಿಸಬೇಕೆಂದು ಎಚ್.ಎಸ್.ಶಿವಶಂಕರ್ ಮನವಿ ಮಾಡಿದರು.

Previous articleಜಾತಿಗಣತಿ ವರದಿ ಕೈಬಿಟ್ಟು ಮರು ಸಮೀಕ್ಷೆ ನಡೆಸಿ
Next articleಪಂಚಮಸಾಲಿ ಟ್ರಸ್ಟ್‌ಗೆ ಕಾಶಪ್ಪನವರ ನೂತನ ಅಧ್ಯಕ್ಷ