ಧಾರವಾಡ: ಶಾಸಕ ಬಸನಗೌಡ ಪಾಟೀಲ ಯತ್ನಾಳ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿರುವ ಬಿಜೆಪಿ ಹೈಕಮಾಂಡ್ ನಿರ್ಧಾರ ಖಂಡಿಸಿ ಮಾರ್ಚ್ 27ರಂದು ರಾಜ್ಯವ್ಯಾಪಿ ಪಂಚಮಸಾಲಿ ಸಮಾಜದಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಕೂಡಲ ಸಂಗಮ ಪಂಚಮಸಾಲಿಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.
ರಾತ್ರಿ ಇಲ್ಲಿ ತುರ್ತು ಪತ್ರಿಕಾಗೋಷ್ಠಿ ನಡೆಸಿದ ಅವರು, ಬಿಜೆಪಿ ಹೈಕಮಾಂಡ್ ನಿರ್ಧಾರದ ಬಗ್ಗೆ ಚರ್ಚಿಸಲು ನಾಳೆ(ಮಾ. 27ರಂದು) ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದ ಹಿರಿಯರು, ಹೋರಾಟಗಾರರ ತುರ್ತು ಸಭೆಯನ್ನು ಮಧ್ಯಾಹ್ನ 1ಗಂಟೆಗೆ ಕರೆಯಲಾಗಿದೆ. ಯತ್ನಾಳ್ ಅವರಿಗೆ ಅನ್ಯಾಯ ಆಗುವುದನ್ನು ಸಮಾಜ ಸಹಿಸಲ್ಲ. ಹಳ್ಳಿಯಿಂದ ಹಿಡಿದು ದಿಲ್ಲಿಯವರೆಗೂ ಹೋದಾಟ ಮಾಡುತ್ತೇವೆ ಎಂದರು.
ಪಕ್ಷದಲ್ಲಿ ನಿಷ್ಠಾವಂತರಿಗೆ ಆಗಿರುವ, ಆಗುತ್ತಿರುವ ಅನ್ಯಾಯದ ಬಗ್ಗೆ ಯತ್ನಾಳ್ ಪ್ರಶ್ನೆ ಮಾಡಿದ್ದಾರೆ. ನ್ಯಾಯ ಕೇಳುವುದು ತಪ್ಪೆ? ಅನ್ಯಾಯ ಪ್ರಶ್ನೆ ಮಾಡಿದ್ದಕ್ಕೆ ಉಚ್ಛಾಟನೆ ಶಿಕ್ಷೆ ಸರಿಯಲ್ಲ. ಬಿಜೆಪಿ ಹೈ ಕಮಾಂಡ್ ತನ್ನ ನಿರ್ಧಾರ ಮರುಪರಿಶೀಲನೆ ಮಾಡಿ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.