ಯಕ್ಷಗಾನ ಕಲಾವಿದ ಮುಂಡಾಜೆ ಸದಾಶಿವ ಶೆಟ್ಟಿ ನಿಧನ

ಬೆಳ್ತಂಗಡಿ: ತೆಂಕುತಿಟ್ಟಿನ ಯಕ್ಷಗಾನ ವೇಷಧಾರಿ ಮುಂಡಾಜೆ ಸದಾಶಿವ ಶೆಟ್ಟಿ (67) ಶನಿವಾರ ರಾತ್ರಿ ಹೃದಯಾಘಾತದಿಂದ ಮಂಗಳೂರಿನ ಮನೆಯಲ್ಲಿ ನಿಧನರಾದರು.
ಕಟೀಲು ಮೇಳದಲ್ಲಿ ಕಳೆದ 20 ವರ್ಷಗಳಿಂದ ವೇಷಧಾರಿಯಾಗಿ, 3ನೇ ಮೇಳದ ಪ್ರಬಂಧಕರಾಗಿ ಸೇವೆ ಸಲ್ಲಿಸಿದ್ದರು, ಧರ್ಮಸ್ಥಳ, ಕರ್ನಾಟಕ, ಸಸಿಹಿತ್ತು ಮೇಳಗಳಲ್ಲಿ ತುಳು- ಕನ್ನಡ ಪ್ರಸಂಗಗಳಲ್ಲಿ ಎಲ್ಲ ಸ್ವರೂಪದ ಪಾತ್ರಗಳನ್ನು ನಿರ್ವಹಿಸಿದ್ದ ಕಲಾವಿದರಾಗಿದ್ದರು. ಪುಂಡು, ರಾಜವೇಶ, ನಾಟಕೀಯ ವೇಷಗಳಲ್ಲಿ ಛಾಪು ಮೂಡಿಸಿದ್ದಾರೆ. ಇಂದು ಮಧ್ಯಾಹ್ನ 1 ಗಂಟೆಗೆ ಕದ್ರಿ ಮಲ್ಲಿಕಟ್ಟೆ, ಮೈದಾನದಲ್ಲಿ ಅಂತಿಮದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಿದ್ದು, ಮಧ್ಯಾಹ್ನ 1.15 ಕ್ಕೆ ಕದ್ರಿ ರುದ್ರಭೂಮಿಯಲ್ಲಿ ಅಂತ್ಯಸಂಸ್ಕಾರ ಜರಗಲಿದೆ ಎಂದು ತಿಳಿದು ಬಂದಿದೆ.
ಹೃದಯ ಸಂಬಂಧಿ ಅನಾರೋಗ್ಯ ನಿಮಿತ್ತ ಕೆಲ ದಿನಗಳ ಹಿಂದಷ್ಟೇ ಅವರಿಗೆ ಆಂಜಿಯೋಪ್ಲಾಸ್ಟಿ ಚಿಕಿತ್ಸೆ ಪಡೆದು ಚೇತರಿಸಿ ಮನೆಗೆ ಮರಳಿದ್ದರು ಎಂದು ತಿಳಿದು ಬಂದಿದೆ. ಅವರು ಪತ್ನಿ, ಇಬ್ಬರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ.