ಮೌಲ್ವಿಗಳ ಆಣತಿಯಂತೆ ಸರಕಾರ ನಡೆಸುತ್ತಿದ್ದಾರೆ

ಬೆಂಗಳೂರು: ಮೌಲ್ವಿಗಳ ಸಲಹೆ ಪಡೆದು ಸರ್ಕಾರ ನಡೆಸಿದರೆ ಮುಸ್ಲಿಮರಿಗೆ ಮಾತ್ರ ಮೀಸಲಾತಿ ಸಿಗುತ್ತದೆ ಎನ್ನುವುದಕ್ಕೆ ರಾಜ್ಯ ಕಾಂಗ್ರೆಸ್ ಸರ್ಕಾರದ ಆಡಳಿತ ವೈಖರಿಯೇ ಸಾಕ್ಷಿ ಎಂದು ಮಾಜಿ ಸಚಿವ ವಿ.ಸುನೀಲ್‌ಕುಮಾರ್ ಟೀಕಿಸಿದ್ದಾರೆ.
ಅಂದು ತುರ್ತು ಪರಿಸ್ಥಿತಿ ಹೇರಿ ಸಂವಿಧಾನ ವಿರೂಪ ಮಾಡಿದ್ದು ಕಾಂಗ್ರೆಸ್, ಇಂದು ಮುಸ್ಲಿಮರಿಗೆ ಮಾತ್ರ ಮೀಸಲಾತಿ ನೀಡಿ ಸಂವಿಧಾನವನ್ನೇ ವಿರೂಪ ಮಾಡುತ್ತಿದೆ. ಡಾ.ಅಂಬೇಡ್ಕರ್ ಮೀಸಲಾತಿ ನೀಡಿದ್ದು ಧರ್ಮದ ಆಧಾರದ ಮೇಲೆ ಅಲ್ಲ. ಆದರೆ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಿ ಸಂವಿಧಾನದ ಆಶಯವನ್ನೇ ಬುಡಮೇಲು ಮಾಡುತ್ತಿದೆ. ಮೀಸಲಾತಿಯನ್ನು ಕೇವಲ ತಮ್ಮ ಮತ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿರುವ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಧಿಕ್ಕಾರ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಈ ಹಿಂದೆ ಬಜೆಟ್‌ನಲ್ಲಿ ಮುಸ್ಲಿಮರಿಗೆ ಶೇ. ೪ರಷ್ಟು ಗುತ್ತಿಗೆ ಮೀಸಲಾತಿ ಘೋಷಣೆ ಮಾಡಿತ್ತು. ಈ ವಿಧೇಯಕ ರಾಷ್ಟçಪತಿಗಳ ಒಪ್ಪಿಗೆಗೆ ಬಾಕಿ ಇರುವಾಗಲೇ ಹಠಕ್ಕೆ ಬಿದ್ದು ಮುಸ್ಲಿಂ ಓಲೈಕೆಗೆ ಸರ್ಕಾರ ಮುಂದಾಗಿದೆ. ಶಾಸನಾತ್ಮಕ ನಿಯಮಗಳನ್ನು ಪಾಲಿಸದೇ ಮೀಸಲಾತಿಯ ಆಶಯವನ್ನೇ ಕಾಂಗ್ರೆಸ್ ಸರ್ಕಾರ ಧ್ವಂಸ ಮಾಡುತ್ತಿದೆ ಎಂದಿದ್ದಾರೆ.