ಅದೆಲ್ಲಿಗೆ ಹೋಗಿದ್ದನೋ ಏನೋ ಹತ್ತಾರು ದಿನಗಳ ನಂತರ ಊರಿಗೆ ಆಗಮಿಸಿದ ತಿಗಡೇಸಿಯ ಮುಖ ಒಂಥರಾ ಕಳೆ ಕಳೆಯಾಗಿತ್ತು. ಒಂಥರಾ ಜೋಲು ಮುಖ ಮಾಡಿಕೊಂಡು ಓಡಾಡುತ್ತಿದ್ದ ಆತ ಎಲ್ಲರೊಂದಿಗೆ ನಗುನಗುತ್ತ ಮತಾನಾಡುತ್ತಿದ್ದ. ಆತನಲ್ಲಿ ಆದ ಬದಲಾವಣೆ ಕಂಡ ಗೆಳೆಯರು ಎಲ್ಲಿ ಹೋಗಿದ್ದಿ ಎಂದು ಕೇಳಿದಾಗ… ಇಲ್ಲಿ ಬೇಡ ಅಲ್ಲಿ ಕೂತು ಮಾತನಾಡೋಣ ಎಂದು ಊರ ಮುಂದಿನ ಆಲದ ಮರದ ಕೆಳಗೆ ಕರೆದುಕೊಂಡು ಹೋಗಿ ಕಥೆ ಹೇಳತೊಡಗಿದ. ನಿಜ ಹೇಳಬೇಕು ಅಂದರೆ… ಅವತ್ತು ನಾನು ಇಲ್ಲಿಂದ ಬಸ್ಸು ಹತ್ತಿ ಇನ್ನೊಂದೂರಿಗೆ ಹೋದೆ. ಅಲ್ಲಿಂದ ಲಾರಿ ಹಿಡಿದುಕೊಂಡು ಸೀದಾ ಕುಂಭಮೇಳಕ್ಕೆ ಹೋಗಿದ್ದೆ. ನನ್ನ ಜೀವನ ಪಾವನವಾಯಿತು. ನನ್ನ ಅದೃಷ್ಟದ ಬಾಗಿಲು ತಂತಾನೇ ತೆರೆದುಕೊಂಡಿದೆ. ಅಬ್ಬ… ಎಂದು ನಾಚಿಕೊಂಡಂತೆ ಮುಖ ಮಾಡಿದ… ಯಾಕೆ ಒಂಥರಾ ಮುಖ ಮಾಡುತ್ತೀಯ ಎಂದು ಕೇಳಿದಾಗ..ಏನಿಲ್ಲ…ಹೇಗೆ ಹೇಳಬೇಕೋ ಗೊತ್ತಾಗುತ್ತಿಲ್ಲ. ಅಲ್ಲಿ ನನಗೆ ಮೊನಾಲಿಸಾ ಸಿಕ್ಕಳು… ಅಂದ. ಮೊನಾಲಿಸಾ ಅಂದರೆ ಯಾರು? ಎಂದು ಗೆಳೆಯರು ಕೇಳಿದಾಗ… ನಿಟ್ಟುಸಿರು ಬಿಟ್ಟ ತಿಗಡೇಸಿ.. ಹಾಗಾದರೆ ಹೇಳುತ್ತೇನೆ ಕೇಳು ಎಂದು…. ಹಿಂದೆ ನಮ್ಮ ತಾತ(ಅಪ್ಪನ ಅಪ್ಪ) ನಮ್ಮ ಅಪ್ಪ ಅವರ ನೀಲಿ ಕಣ್ಣು ಇರುವ ತಂಗಿ(ನನಗೆ ಸೋದರತ್ತೆ) ಅವರನ್ನು ಕರೆದುಕೊಂಡು ಕುಂಭಮೇಳಕ್ಕೆ ಹೋಗಿದ್ದರಂತೆ. ಆಗ ನಮ್ಮ ಅಪ್ಪನ ತಂಗಿ ಜನಜಂಗುಳಿಯಲ್ಲಿ ತಪ್ಪಿಸಿಕೊಂಡಳಂತೆ. ಸುಮಾರು ಒಂದು ತಿಂಗಳ ಕಾಲ ಹುಡುಕಿದರೂ ಅಲ್ಲಿ ಸಿಗಲಿಲ್ಲ. ಇನ್ನೇನು ಸಿಗಲ್ಲ ಬಿಡು ಎಂದು ಊರಿಗೆ ಮರಳಿದರು. ಅಂದಿನಿಂದ ಪ್ರತಿವರ್ಷ ನಮಪ್ಪ ಅಲ್ಲಿಗೆ ಹೋಗಿ ತಂಗಿಯನ್ನು ಹುಡುಕುತ್ತಿದ್ದ. ಸಿಗುತ್ತಿರಲಿಲ್ಲ. ಕರಿಲಕ್ಷಂಪತಿಯ ಹತ್ತಿರ ಶಾಸ್ತ್ರ ಕೇಳಿದಾಗ… ನಿನ್ನ ಮಗನಿಗೆ ಸಿಗುತ್ತಾರೆ ಅಂತ ಹೇಳಿದ್ದನಂತೆ. ಹಾಗಾಗಿ ಈ ಬಾರಿ ನನ್ನ ಕಳುಹಿಸಿದರು. ನಾನು ಹುಡುಕಿ ಹುಡುಕಿ ಸಾಕಾಯಿತು… ಇನ್ನೇನು ನನಗೂ ಸಿಗಲಿಲ್ಲ ಬಿಡು ಎಂದು ಬೇಜಾರಾಗಿತ್ತು. ಸುಮ್ಮನೇ ಕುಳಿತಿದ್ದೆ. ಒಂದು ಹುಡುಗಿ ರುದ್ರಾಕ್ಷಿ ಮಾರುತ್ತ ನನ್ನ ಹತ್ತಿರ ಬಂದಳು. ನಾನು ಅವಳನ್ನು ನೋಡಿದೆ.. ಹೆಸರೇನು ಎಂದು ಕೇಳಿದೆ ಮೊನಾಲಿಸಾ ಅಂದಳು. ಅಬ್ಬ..! ಕಣ್ಣುಗಳನ್ನು ನೋಡಿದ ಕೂಡಲೇ ಅಪ್ಪ ಹಗಲೆಲ್ಲ ತಮ್ಮ ತಂಗಿಯ ಕಣ್ಣುಗಳ ಬಗ್ಗೆ ಹೇಳುತ್ತಿದ್ದನಲ್ಲ ಅದು ನೆನಪಿಗೆ ಬಂತು… ಆಕೆಯ ಹತ್ತಿರ ಹೋಗಿ ರುದ್ರಾಕ್ಷಿಗಳನ್ನು ತೆಗೆದುಕೊಂಡೆ…ನಂತರ ಆಕೆಯ ಊರು, ಕೇರಿ, ಅಪ್ಪ ಅಮ್ಮನ ಬಗ್ಗೆ ಕೇಳಿದೆ… ಎಲ್ಲ ಹೇಳಿದಳು. ಎಲ್ಲವೂ ಸರಿಹೋದರೆ ಹಳೆಯ ಸಂಬಂಧ ಯಾಕೆ ಬಿಡಬೇಕು ಅಂತ ನಮಪ್ಪ ಅಮ್ಮನ ಮುಂದೆ ಹೇಳಿದ್ದು ಕೇಳಿಸಿಕೊಂಡೆ. ಮೋಸ್ಟ್ಲಿ…ಮೋಸ್ಟ್ಲಿ ಅಂತ ಹುಳ್ಳಗೇ ನಗುತ್ತಿದ್ದ ಕಥೆ ಕೇಳಿದ ಗೆಳೆಯ ಸುಸ್ತಾಗಿದ್ದ.