ಧಾರವಾಡ: ಜಾತಿ ಜನಗಣತಿ 10 ವರ್ಷಗಳ ಹಿಂದಿನದು ಎಂದು ಮೈಸೂರು ಮಹಾರಾಜರು ಆರೋಪಿಸಿದ್ದಾರೆ. ಆದರೆ, ಕಳೆದ 14 ವರ್ಷಗಳಿಂದ ಕೇಂದ್ರ ಸರಕಾರ ಜನಗಣತಿಯನ್ನೇ ಮಾಡಿಲ್ಲ. ಇದರ ಬಗ್ಗೆ ಮೊದಲು ಮಹಾರಾಜರು ಮಾತನಾಡಲಿ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಪ್ರಶ್ನಿಸಿದರು.
ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿ, 10 ವರ್ಷಕ್ಕೊಮ್ಮೆ ಜನಗಣತಿ ಆಗಬೇಕು. ಆದರೆ, ಕೇಂದ್ರ ಸರಕಾರ 14 ವರ್ಷದಿಂದ ಜನಗಣತಿ ಮಾಡಿಲ್ಲ. 2020ರಲ್ಲಿ ಗಣತಿ ಆಗಬೇಕಿತ್ತು. ಅದನ್ನು ಬಿಜೆಪಿಯವರು ಮಾಡಿಸಿಲ್ಲ. ಈ ಕುರಿತು ಬಿಜೆಪಿಯವರು ಯಾಕೆ ಮಾತನಾಡುತ್ತಿಲ್ಲ ಎಂದರು.
ನಮ್ಮ ಸರ್ಕಾರದ ಜಾತಿ ಜನಗಣತಿಯಲ್ಲಿ ಲೋಪ-ದೋಷ ಇದ್ದರೆ ಹೇಳಲಿ, ಮೊದಲು ವರದಿ ಹೊರಗೆ ಬರಲಿ. ಈ ಬಗ್ಗೆ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಹೇಳಿಕೆ ನೀಡಿದ್ದಾರೆ. ಸಂಬಂಧಿಸಿದ ಇಲಾಖೆ ಇದರ ಬಗ್ಗೆ ಮಾಹಿತಿ ಕೊಡಲಿದೆ. ಅಲ್ಲಿಯವರೆಗೂ ಮಹಾರಾಜರು ಸ್ವಲ್ಪ ಸಮಾಧಾನದಿಂದ ಇರಬೇಕು ಎಂದು ವ್ಯಂಗ್ಯವಾಡಿದರು.
ತಾವರಕೆರೆಯಲ್ಲಿ ಮಹಿಳೆ ಮೇಲಿನ ಹಲ್ಲೆಗೆ ಪ್ರತಿಕ್ರಿಯೆ ನೀಡುತ್ತ, ಮಹಿಳೆಯ ಮೆಲೆ ಹಲ್ಲೆ ನಡೆದಿರುವುದು ಅಮಾನವೀಯ. ಆದರೆ, ಅದಕ್ಕೆ ತಾಲಿಬಾನಿ ಪದ ಬಳಕೆ ಮಾಡಬೇಡಿ. ಒಂದು ವೇಳೆ ಇಲ್ಲಿ ನಡೆದ ಹಲ್ಲೆ ತಾಲಿಬಾನಿ ರೀತಿಯಲ್ಲಿ ಎನ್ನುವುದಾದರೆ ಮಣಿಪುರದಲ್ಲಿ ನಡೆದದ್ದು ಏನು ಎಂದು ಪ್ರಶ್ನಿಸಿದರು.
ರಾಜ್ಯದಲ್ಲಿ ಇಂತಹ ಘಟನೆಗಳು ಸಾಕಷ್ಟು ಆಗಿರುತ್ತವೆ. ಅಂತವುಗಳಿಗೆ ತಾಲಿಬಾನಿ ಪದ ಬಳಕೆ ಮಾಡುವುದು ಸರಿಯಲ್ಲ. ಮಣಿಪುರದಲ್ಲಿ ಎರಡು ವರ್ಷಗಳಿಂದ ಏನಾಗುತ್ತಿದೆ ಎನ್ನುವುದರತ್ತ ಗಮನ ಹರಿಸಲಿ ಎಂದರು.