ಮೇ.15ರಿಂದ ರಾಜ್ಯಾದ್ಯಂತ ಮಹಾಸಂಘರ್ಷ ಯಾತ್ರೆ

0
63

ಬೆಂಗಳೂರು: ಕನ್ನಡಿಗರ ಹಕ್ಕುಸ್ಥಾಪನೆಗಾಗಿ ʻಮಹಾಸಂಘರ್ಷ ಯಾತ್ರೆʼ ಮೇ.15ರಿಂದ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಯಾತ್ರೆ ಸಾಗಲಿದೆ ಎಂದು ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಹೇಳಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯಕಾರಿಣಿ ಹೋಟೆಲ್ ಲಲಿತ್ ಅಶೋಕದಲ್ಲಿ ನಡೆದ ರಾಜ್ಯದ ಎಲ್ಲ 31 ಜಿಲ್ಲೆಗಳ ಜಿಲ್ಲಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು ಕಾರ್ಯಕಾರಿಣಿಯಲ್ಲಿ ಪಾಲ್ಗೊಂಡಿದ್ದರು. ಸಭೆಯಲ್ಲಿ ಕರ್ನಾಟಕ ನಾಡು, ನುಡಿ ರಕ್ಷಣೆಯ ಹೋರಾಟಕ್ಕೆ ಸಂಬಂಧಪಟ್ಟಂತೆ ಇಡೀ ದಿನ ಚರ್ಚೆ ನಡೆದು ಹಲವು ಮುಖ್ಯ ತೀರ್ಮಾನಗಳನ್ನು ಕೈಗೊಂಡಿದ್ದಾರೆ.
ಈ ಕುರಿತಂತೆ ಟಿ.ಎ.ನಾರಾಯಣಗೌಡ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯ ಕಾರ್ಯಕಾರಿಣಿ ಸಭೆಯ ತೀರ್ಮಾನಗಳು ಹಂಚಿಕೊಂಡಿದ್ದಾರೆ.

ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರ ನೇತೃತ್ವದಲ್ಲಿ ಕನ್ನಡಿಗರ ಹಕ್ಕುಸ್ಥಾಪನೆಗಾಗಿ ʻಮಹಾಸಂಘರ್ಷ ಯಾತ್ರೆʼ ಈಗಾಗಲೇ ಬೆಂಗಳೂರಿನಲ್ಲಿ ಉದ್ಘಾಟನೆಯಾಗಿದ್ದು, ಮೇ.15ರಿಂದ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಯಾತ್ರೆ ಸಾಗಲಿದೆ. ಇದಕ್ಕಾಗಿ ಸೂಕ್ತ ತಯಾರಿಗಳನ್ನು ಮಾಡಿಕೊಳ್ಳಲು ಪದಾಧಿಕಾರಿಗಳಿಗೆ ಸೂಚಿಸಲಾಯಿತು.

ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲ ಉತ್ಪನ್ನಗಳ ಮೇಲೆ ಕನ್ನಡದಲ್ಲಿ ಬರೆಹವಿರಬೇಕು ಎಂಬ ನಮ್ಮ ಬೇಡಿಕೆಯನ್ನು ಸರ್ಕಾರ ಈಗಾಗಲೇ ಈಡೇರಿಸಿದ್ದು, ಅದು ಅನುಷ್ಠಾನಗೊಳ್ಳಬೇಕಿದೆ. ಹಾಗೆಯೇ ಕರ್ನಾಟಕದಲ್ಲಿ ಮಾರಾಟವಾಗುವ ಎಲ್ಲ ಉತ್ಪನ್ನಗಳ ಏಜೆನ್ಸಿ ಕನ್ನಡಿಗರಿಗೇ ಕೊಡಬೇಕು ಎಂಬುದು ಮಹಸಂಘರ್ಷ ಯಾತ್ರೆಯ ಬೇಡಿಕೆಯಾಗಿದೆ. ಕರ್ನಾಟಕದ ಎಲ್ಲ ಬ್ಯಾಂಕುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಹಿಂದಿಯನ್ ರಾಜ್ಯಗಳ ಜನರನ್ನು ಕೇಂದ್ರ ಸರ್ಕಾರ ಹಿಂದಕ್ಕೆ ಕರೆಯಿಸಿಕೊಳ್ಳಬೇಕು. ಆ ಜಾಗಗಳಿಗೆ ಕನ್ನಡಿಗರನ್ನೇ ನೇಮಕ ಮಾಡಿಕೊಳ್ಳಬೇಕು ಎಂಬುದು ಮಹಾಸಂಘರ್ಷ ಯಾತ್ರೆಯ ಮತ್ತೊಂದು ಗುರಿಯಾಗಿದೆ.

ಅದೇ ರೀತಿ ಕರ್ನಾಟಕದಲ್ಲಿ ಶಿಕ್ಷಣ ನೀತಿಯಲ್ಲಿ ಬದಲಾವಣೆ ಮಾಡಿ ತಮಿಳುನಾಡು ಮಾದರಿಯಲ್ಲಿ ʻದ್ವಿಭಾಷಾ ನೀತಿʼಯನ್ನು ಜಾರಿಗೊಳಿಸಿ ಹಿಂದಿ ಕಲಿಕೆ ಕಡ್ಡಾಯವನ್ನು ತೊಲಗಿಸಬೇಕು. ಕೇಂದ್ರ ಸರ್ಕಾರ ಕ್ಷೇತ್ರವಾರು ಪುನರ್ ವಿಂಗಡಣೆಯ ಹೆಸರಿನಲ್ಲಿ ದಕ್ಷಿಣ ಭಾರತದ ರಾಜ್ಯಗಳಿಗೆ ಅನ್ಯಾಯವೆಸಗುತ್ತಿದ್ದು, ಲೋಕಸಭೆ, ರಾಜ್ಯಸಭೆಗಳಲ್ಲಿ ಕನ್ನಡಿಗರ ಪ್ರಾತಿನಿಧ್ಯ ಶೇಕಡಾವಾರು ಕುಸಿಯಲಿದೆ. ಈ ಹಿನ್ನೆಲೆಯಲ್ಲಿ ಜನಸಂಖ್ಯೆ ಆಧಾರದಲ್ಲಿ ಕ್ಷೇತ್ರವಾರು ಪುನರ್ ವಿಂಗಡಣೆಯನ್ನು ನಡೆಸಕೂಡದು ಎಂಬುದು ಕರ್ನಾಟಕ ರಕ್ಷಣಾ ವೇದಿಕೆಯ ಮತ್ತೊಂದು ಪ್ರಮುಖ ಬೇಡಿಕೆಯಾಗಿದೆ.

ಈ ಎಲ್ಲ ವಿಷಯಗಳನ್ನು ಮುಂದಿಟ್ಟುಕೊಂಡು ಇಡೀ ರಾಜ್ಯಾದ್ಯಂತ ಕರ್ನಾಟಕ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷರಾದ ಶ್ರೀ ಟಿ.ಎ.ನಾರಾಯಣಗೌಡರು ʻಮಹಾಸಂಘರ್ಷ ಯಾತ್ರೆʼ ಕೈಗೊಳ್ಳಲಿದ್ದು, ಇಂದಿನಿಂದಲೇ ಎಲ್ಲ ಜಿಲ್ಲೆ, ತಾಲ್ಲೂಕುಗಳಲ್ಲಿ ವ್ಯಾಪಕವಾದ ಪ್ರಚಾರಾಂದೋಲನ ಕೈಗೊಳ್ಳಲು ಸೂಚಿಸಲಾಯಿತು.

ಕೆ.ಪಿ.ಎಸ್.ಸಿ ಪರೀಕ್ಷೆಗಳಲ್ಲಿ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳಿಗೆ ಆದ ಅನ್ಯಾಯದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ ನಡೆಸಿದ ಬೃಹತ್ ಚಳವಳಿಯಿಂದಾಗಿ ಸರ್ಕಾರ ಇನ್ನು ಮುಂದೆ ಕೆಪಿಎಸ್ಸಿ ಪರೀಕ್ಷೆಗಳಲ್ಲಿ ಮೊದಲು ಕನ್ನಡದಲ್ಲೇ ಪ್ರಶ್ನೆ ಪತ್ರಿಕೆ ತಯಾರಿಸಿ ನಂತರ ಇಂಗ್ಲಿಷ್ ಗೆ ಅನುವಾದಿಸುವಂತೆ ನಿಯಮ ರೂಪಿಸಿದೆ. ಹೋರಾಟ ಭಾಗಶಃ ಯಶಸ್ವಿಯಾಗಿದೆ. ಆದರೆ ಡಿಸೆಂಬರ್ 29ರಂದು ನಡೆದ ಪರೀಕ್ಷೆಯಲ್ಲಿ ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿಗಳಿಗೆ ಇನ್ನೂ ನ್ಯಾಯ ದೊರೆತಿಲ್ಲ. ಈ ಹಿನ್ನೆಲೆಯಲ್ಲಿ ಕಾನೂನು ಹೋರಾಟ ರೂಪಿಸುವ ನಿರ್ಧಾರ ಕೈಗೊಳ್ಳಲಾಯಿತು. ರಾಜ್ಯ ಉಚ್ಛನ್ಯಾಯಾಲಯದಲ್ಲಿ ಈಗಾಗಲೇ ವಿದ್ಯಾರ್ಥಿಗಳ ಪರವಾಗಿ ದಾವೆ ಹೂಡಲಾಗಿದ್ದು, ಅದನ್ನು ಗಂಭೀರವಾಗಿ ಮುಂದುವರೆಸಲು ತೀರ್ಮಾನಿಸಲಾಯಿತು ಎಂದಿದ್ದಾರೆ.

Previous articleಚಿಕಿತ್ಸೆಗೆ ಆಸ್ಪತ್ರೆ ಸೇರಿದ್ದ ಯುವಕ ಆತ್ಮಹತ್ಯೆ
Next articleಪರಾರಿಗೆ ಯತ್ನ: ಕೊಲೆಗಾರನ ಕಾಲಿಗೆ ಗುಂಡು