ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ನೌಕರರಿಗೆ ಸರ್ಕಾರದಿಂದ ಬರಬೇಕಿದ್ದ 21 ಕೋಟಿ ರೂ. ವೇತನಾನುದಾನ ಕಳೆದ ಮೂರು ತಿಂಗಳಿನಿಂದ ಬಂದಿಲ್ಲ. ಇದರಿಂದ ನೌಕರರು ಪರದಾಡುವಂತಾಗಿದ್ದು, ಇನ್ನೊಂದು ತಿಂಗಳಲ್ಲಿ ಮಹಾನಗರ ಪಾಲಿಕೆ ಮುಚ್ಚುವ ಪರಿಸ್ಥಿತಿ ಬರಲಿದೆ ಎಂದು ಹು-ಧಾ ಪಾಲಿಕೆಯ ಸಭಾ ನಾಯಕ ವೀರಣ್ಣ ಸವಡಿ ಕಳವಳ ವ್ಯಕ್ತಪಡಿಸಿದರು.
ಸೋಮವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಕಾಯಂ ಪೌರಕಾರ್ಮಿಕರಿಂದ ಹಿಡಿದು ಆಯುಕ್ತರಿಗೂ ಸರ್ಕಾರವೇ ವೇತನ ನೀಡುತ್ತಿತ್ತು. ಆದರೆ, ಕಳೆದ ಮೂರು ತಿಂಗಳಿನಿಂದ ವೇತನಾನುದಾನ ಬಿಡುಗಡೆ ಆಗಿಲ್ಲ. ಇದನ್ನು ಪ್ರಶ್ನಿಸಿ ಪಾಲಿಕೆಯಿಂದ ಪತ್ರ ಬರೆದಿದ್ದು, `ಪಾಲಿಕೆಯ ಸಾಮಾನ್ಯ ನಿಧಿಯಿಂದ ವೇತನ ನೀಡುವಂತೆ’ ಸರ್ಕಾರ ಉತ್ತರ ನೀಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದಿಂದ ೨೯೦ ಕೋಟಿ ಅನುದಾನ ಬಂದಿಲ್ಲ
೧೫ನೇ ಹಣಕಾಸು, ಎಸ್‌ಎಫ್‌ಸಿ ಮುಕ್ತನಿಧಿ, ಮಹಾತ್ಮ ಗಾಂಧಿ ನಗರ ವಿಕಾಸ ಯೋಜನೆ, ಪಿಂಚಣಿ ಬಾಕಿ, ಅಮೃತ ಯೋಜನೆ ಸೇರಿ ೨೯೦ ಕೋಟಿ ರೂ. ಅನುದಾನ ಸರ್ಕಾರದಿಂದ ಬರಬೇಕಿದೆ. ಇದರೊಟ್ಟಿಗೆ ೬ನೇ ವೇತನ ಮತ್ತು ೭ನೇ ವೇತನದ ವ್ಯತ್ಯಾಸ ಮೊತ್ತವೂ ಪಾಲಿಕೆಗೆ ಬರಬೇಕಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್, ಕಾರ್ಯದರ್ಶಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಸ್ಪಂದನೆ ಸಿಕ್ಕಿಲ್ಲ. ಸ್ವತಃ ಆಯುಕ್ತರೇ ಸಂತೋಷ್ ಲಾಡ್ ಅವರಿಗೆ ಕರೆ ಮಾಡಿ ಪಾಲಿಕೆಯ ಹಣಕಾಸಿನ ಸ್ಥಿತಿಗಳನ್ನು ವಿವರಿಸಿದರೂ ಪ್ರಯೋಜನವಾಗಿಲ್ಲ ಎಂದು ತಿಳಿಸಿದರು.
ಪಾಲಿಕೆಯಲ್ಲಿ ಚುನಾಯಿತರ ಅಧಿಕಾರ ಇಲ್ಲದ ೨.೫ ವರ್ಷ ಅವಧಿಯಲ್ಲಿ ಶಾಸಕರು ಬೇಕಾ ಬಿಟ್ಟಿಯಾಗಿ ಪಾಲಿಕೆಯ ಸಾಮಾನ್ಯ ನಿಧಿಯನ್ನು ಬಳಸಿಕೊಂಡಿದ್ದಾರೆ. ಚುನಾಯಿತರ ಆಡಳಿತ ಅಸ್ತಿತ್ವಕ್ಕೆ ಬಂದ ಬಳಿಕವೂ ಈ ಪದ್ಧತಿ ರೂಢಿಯಲ್ಲಿದೆ. ಹೀಗಾಗಿ, ಪಾಲಿಕೆಯ ಸಾಮಾನ್ಯ ನಿಧಿ ಕರಗಿದೆ. ಪಾಲಿಕೆಗೆ ನ್ಯಾಯಯುತವಾಗಿ ಬರಬೇಕಾದ ಅನುದಾನ ಮಾ. ೩೧ರೊಳಗೆ ಬಾರದಿದ್ದರೆ ಕಾನೂನು ಸಮರಕ್ಕೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು. ಪಾಲಿಕೆ ಸದಸ್ಯ ಶಿವು ಹಿರೇಮಠ ಪತ್ರಿಕಾಗೋಷ್ಠಿಯಲ್ಲಿದ್ದರು.
ಸರ್ಕಾರದ ನಡೆ ಖಂಡನೀಯ…
ಮೇಯರ್ ಹಾಗೂ ಸದಸ್ಯರು 2 ವರ್ಷದಿಂದ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಿದ್ದಾರೆ. ಆದರೂ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ಸ್ಥಳೀಯ ಸಂಸ್ಥೆಗಳನ್ನು ಸದೃಢ ಮಾಡುವುದು ಸರ್ಕಾರದ ಮೊದಲ ಆದ್ಯತೆ. ಆದರೆ, ಸರ್ಕಾರ ಇದಕ್ಕೆ ತದ್ವಿರುದ್ಧ ಧೋರಣೆ ಅನುಸರಿಸುತ್ತಿದೆ. ಹೀಗಾಗಿ, ಸರ್ಕಾರದ ನಡೆ ಖಂಡಿಸಿ ಸರ್ವ ಪಕ್ಷದ ಸದಸ್ಯರು ರಾಜ್ಯಪಾಲರ ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ ಎಂದು ಪಾಲಿಕೆ ಸದಸ್ಯ ಹಾಗೂ ಬಿಜೆಪಿ ಜಿಲ್ಲಾ ಘಟಕ ಅಧ್ಯಕ್ಷ ತಿಪ್ಪಣ್ಣ ಮಜ್ಜಗಿ ತಿಳಿಸಿದರು.