ಮೂಡಾದಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರವಿಲ್ಲ: ಸಂಸದೆ ಪ್ರಭಾ

0
10

ದಾವಣಗೆರೆ: ಮೂಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರ ಏನೂ ಇಲ್ಲ ಎಂದು ದಾವಣಗೆರೆ ಕಾಂಗ್ರೆಸ್ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ ಮುಖ್ಯಮಂತ್ರಿ ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.

ನಗರದಲ್ಲಿ ಸೋಮವಾರ ಕಾಂಗ್ರೆಸ್ ಹಮ್ಮಿಕೊಂಡಿದ್ದ ಪ್ರತಿಭಟನೆ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರ ಶ್ರೀಮತಿಗೆ ತವರು ಮನೆಯವರು ಸೈಟ್ ತೆಗೆದುಕೊಳ್ಳುವಾಗ ಸಿದ್ದರಾಮಯ್ಯ ಅಧಿಕಾರದಲ್ಲೇ ಇರಲಿಲ್ಲ ಎಂದರು.

ದೇಶದಲ್ಲಿ ಎಲ್ಲೆಲ್ಲಿ ಕಾಂಗ್ರೆಸ್ ಸರ್ಕಾರವಿದೆಯೋ ಅಲ್ಲೆಲ್ಲಾ ಕೇಂದ್ರ ಸರ್ಕಾರವು ಇದೇ ರೀತಿ ಮಾಡುತ್ತಿದೆ. ನಾವು ಎಚ್ಚೆತ್ತುಕೊಳ್ಳಬೇಕಿದೆಯಷ್ಟೇ. ಜಾರ್ಖಂಡ್‌ನಲ್ಲೂ ಇದೇ ರೀತಿ ಮಾಡಿದ್ದಾರೆ. ಸಿದ್ದರಾಮಯ್ಯ ಪರವಾಗಿ ನಮ್ಮೆಲ್ಲಾ 136 ಶಾಸಕರು, ನಮ್ಮೆಲ್ಲಾ ಸಂಸದರ ಬೆಂಬಲವೂ ಇದೆ. ಸಿಎಂ ಸಿದ್ದರಾಮಯ್ಯನವರಿಗೆ ಏನೂ ಆಗುವುದಿಲ್ಲವೆಂಬ ಸಂಪೂರ್ಣ ಭರವಸೆ ನಮಗಿದೆ ಎಂದು ಅವರು ತಿಳಿಸಿದರು.

ನಮ್ಮ ದೇಶದ ಕಾನೂನು, ಸಂವಿಧಾನದ ಮೇಲೆ ಅಪಾರವಾದ ನಂಬಿಕೆ, ವಿಶ್ವಾಸ ನಮಗಿದೆ. ಐಟಿ ಮತ್ತು ಇಡಿಯಂತಹ ಸ್ವಾಯತ್ತ ಸಂಸ್ಥೆಗಳನ್ನು ಕೇಂದ್ರ ಸರ್ಕಾರವು ತನ್ನ ವೈಯಕ್ತಿಕ ಹಿತಾಸಕ್ತಿ, ಸ್ವಾರ್ಥಕ್ಕಾಗಿ ಬಳಕೆ ಮಾಡಿಕೊಳ್ಳುತ್ತಿದೆ. ನಮಗೂ ಕಾನೂನಿನ ಬಗ್ಗೆ ಗೊತ್ತಿದೆ. ನಾವು ಕಾನೂನಾತ್ಮಕ ಹೋರಾಟ ನಡೆಸುತ್ತೇವೆ. ಸಿದ್ದರಾಮಯ್ಯ ವಿರುದ್ಧ ಏನೇ ಷಡ್ಯಂತ್ರ ಮಾಡಿದರೂ ಏನೂ ಆಗುವುದಿಲ್ಲ ಎಂದು ಅವರು ಹೇಳಿದರು.

ಅಹಿಂಸೆ, ಶಾಂತಿಯುತ ಪ್ರತಿಭಟನೆಯಲ್ಲಿ ನಾವು ನಂಬಿಕೆ ಇಟ್ಟುಕೊಂಡಿದ್ದೇವೆ. ನಾವು ಒಗ್ಗಟ್ಟಿನಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಹೋರಾಟ ನಡೆಸುತ್ತಿದ್ದೇವೆ. ಸಿದ್ದರಾಮಯ್ಯ ವಿರುದ್ಧ ಕೇಂದ್ರ ಸರ್ಕಾರವೇನಾದರೂ ನಿಲುವು ಕೈಗೊಂಡರೆನಾವೂ ಸಹ ಬೀದಿಗಿಳಿದು, ಶಕ್ತಿ ಪ್ರದರ್ಶನ ಮಾಡಬೇಕಾಗುತ್ತದೆ ಎಂದು ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಕೇಂದ್ರ ಸರ್ಕಾರಕ್ಕೆ, ವಿಪಕ್ಷ ಬಿಜೆಪಿಗೆ ಎಚ್ಚರಿಸಿದರು.

Previous articleಖೋಟಾ ನೋಟು ಮುದ್ರಿಸಿ ಚಲಾವಣೆ: ನಾಲ್ವರ ಸೆರೆ
Next articleನೈರುತ್ಯ ರೈಲ್ವೆ: ಹಲವು ರೈಲುಗಳ ಸಂಚಾರ ಭಾಗಶಃ ರದ್ದು