ಬೀದರ್ : ಇಲ್ಲಿನ ಬೀದರ್ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ (ಬುಡಾ) ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಬುಡಾ ಮಾಜಿ ಅಧ್ಯಕ್ಷ ಮತ್ತು ಇತರರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ ೪೦೯(ವಿಶ್ವಾಸಘಾತ, ಧೋಕ) ರ ಅಡಿಯಲ್ಲಿ ದಾಖಲಾದ ಪ್ರಕರಣದ ವಿಚಾರಣೆಯನ್ನು ವೇಗದಿಂದ ನಡೆಸಲಾಗುವುದು ಎಂದು ಬೀದರ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ ಇಲ್ಲಿ ಗುರುವಾರ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿ ಪ್ರಶ್ನೆಗೆ ಉತ್ತರಿಸಿದ ಅವರು ಪ್ರಕರಣ ತನಿಖಾ ಹಂತದಲ್ಲಿರುವುದರಿಂದ ಈ ಹಂತದಲ್ಲಿ ಹೆಚ್ಚಿನ ಮಾಹಿತಿ ನೀಡಲಾಗದು ಎಂದು ಕಡ್ಡಿಯನ್ನು ತುಂಡರಿಸಿದಂತೆ ನುಡಿದರು. ವಿಧಾನ ಪರಿಷತ್ ಸದಸ್ಯ ಯು.ಬಿ.ವೆಂಕಟೇಶ್ ಸದನದಲ್ಲಿ ಕೇಳಿದ ಪ್ರಶ್ನೆಯಿಂದಾಗಿ ಬುಡಾ ಹಗರಣ ಇದೀಗ ಮುನ್ನೆಲೆಗೆ ಬಂದಿದೆ.