ಮುಡಾ: ಸಿಎಂ ಮೇಲ್ಮನವಿ ಅರ್ಜಿ ೨೩ಕ್ಕೆ ವಿಚಾರಣೆ

0
13

ಬೆಂಗಳೂರು: ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಪ್ರಶ್ನಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಲ್ಲಿಸಿರುವ ಮೇಲ್ಮನವಿ ವಿಚಾರಣೆಗೆ ಹೈಕೋರ್ಟ್ ಸಮ್ಮತಿಸಿದೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ(ಮುಡಾ)ದಿಂದ ತಮ್ಮ ಕುಟುಂಬಸ್ಥರಿಗೆ ಬದಲಿ ನಿವೇಶನ ಪಡೆದ ಪ್ರಕ್ರಿಯೆಯಲ್ಲಿ ಅಕ್ರಮವೆಸಗಿದ ಆರೋಪದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದ ರಾಜ್ಯಪಾಲರ ಕ್ರಮ ಎತ್ತಿ ಹಿಡಿದಿದ್ದ ಏಕಸದಸ್ಯ ಪೀಠದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಮೇಲ್ಮನವಿ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನವೆಂಬರ್ ೨೩ಕ್ಕೆ ನಿಗದಿಪಡಿಸಿದೆ.
ಗುರುವಾರ ಹೈಕೋರ್ಟ್‌ನ ಕಲಾಪ ಪ್ರಾರಂಭವಾಗುತ್ತಿದ್ದಂತೆ ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ ಅವರಿದ್ದ ಪೀಠಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ಡಾ.ಅಭಿಷೇಕ್ ಮನು ಸಿಂಘ್ವಿ, ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಲಾಗಿದೆ, ಈವರೆಗೂ ವಿಚಾರಣೆಗೆ ನಿಗದಿಯಾಗಿಲ್ಲ. ಅಲ್ಲದೆ, ಮೇಲ್ಮನವಿ ವಿಚಾರಣೆ ತುರ್ತಾಗಿದ್ದು, ಶೀಘ್ರವೇ ವಿಚಾರಣೆಗೆ ನಿಗದಿಪಡಿಸಬೇಕು ಎಂದು ಕೋರಿದರು. ವಾದ ಆಲಿಸಿದ ಪೀಠ ಇದೇ ೨೩ಕ್ಕೆ ವಿಚಾರಣೆಗೆ ನಿಗದಿಪಡಿಸಿತು.
ಮುಡಾ ಹಗರಣ ಕುರಿತು ಭ್ರಷ್ಟಾಚಾರ ನಿಯಂತ್ರಣ ಕಾಯ್ದೆ (ಪಿಸಿ ಆಕ್ಟ್) ಸೆಕ್ಷನ್ ೧೭ಎ ಅಡಿಯಲ್ಲಿ ಪೊಲೀಸ್ ತನಿಖೆ ಮತ್ತು ಭಾರತೀಯ ನ್ಯಾಯ ಸುರಕ್ಷಾ ಸಂಹಿತೆ (ಬಿಎನ್‌ಎಸ್‌ಎಸ್) ಸೆಕ್ಷನ್ ೨೦೨೩ರ ಸೆಕ್ಷನ್ ೨೧೮ ಅಡಿಯಲ್ಲಿ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿ ರಾಜ್ಯಪಾಲರು ಆದೇಶಿಸಿದ್ದರು. ಈ ಆದೇಶವನ್ನು ಪ್ರಶ್ನಿಸಿ ಹೈಕೋರ್ಟ್‌ಗೆ ತಕರಾರು ಅರ್ಜಿ ಸಲ್ಲಿಸಲಾಗಿತ್ತು. ಪ್ರಕರಣದ ತನಿಖೆಗೆ ಮತ್ತು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಬಾರದು ಎಂದು ರಾಜ್ಯ ಸಚಿವರ ಸಂಪುಟದ ಸದಸ್ಯರು ರಾಜ್ಯಪಾಲರಿಗೆ ಶಿಫಾರಸು ಮಾಡಿದ್ದರು. ಅದನ್ನು ಪರಿಗಣಿಸದೆ ಪ್ರಕರಣದ ತನಿಖೆಗೆ ಮತ್ತು ಪ್ರಾಸಿಕ್ಯೂಷನ್‌ಗೆ ರಾಜ್ಯಪಾಲರೇ ಆತುರದ ಅನುಮತಿ ನೀಡಿದ್ದಾರೆ. ಅಂತಹ ಆದೇಶ ಹೊರಡಿಸಲು ಸಮಂಜಸವಾದ ಕಾರಣಗಳನ್ನೂ ನೀಡಿಲ್ಲ ಮತ್ತು ಸೂಕ್ತವಾಗಿ ವಿವೇಚನೆಯನ್ನೂ ಬಳಸಿಲ್ಲ ಎಂದು ಮೇಲ್ಮನವಿಯಲ್ಲಿ ಆಕ್ಷೇಪಿಸಿದ್ದಾರೆ.
ಸಂಪುಟದ ಸಚಿವರ ಸಲಹೆ ಮತ್ತು ಸೂಚನೆ ಆಧಾರದಲ್ಲಿ ರಾಜ್ಯಪಾಲರು ಕಾರ್ಯ ನಿರ್ವಹಿಸಬೇಕು ಎಂದು ಸಂವಿಧಾನದ ಪರಿಚ್ಛೇದ ೧೬೩ ಸ್ಪಷ್ಟವಾಗಿ ಹೇಳುತ್ತದೆ.
ಆ ಪರಿಚ್ಛೇದವೂ ಸೇರಿದಂತೆ ಸಾಂವಿಧಾನಿಕ ತತ್ವಗಳನ್ನು ಕಡೆಗಣಿಸಿ ರಾಜ್ಯಪಾಲರು ಅನುಮತಿ ನೀಡಿದ್ದರು. ಹಾಗಾಗಿ, ರಾಜ್ಯಪಾಲರ ಪೂರ್ವಾನುಮತಿಯೇ ನಿರಂಕುಶ, ಅಸಾಂವಿಧಾನಿಕ ಮತ್ತು ಅಕ್ರಮವಾಗಿದೆ. ಅಂತಹ ಆದೇಶವನ್ನು ಪುರಸ್ಕರಿಸಿರುವ ಏಕಸದಸ್ಯ ಪೀಠದ ತೀರ್ಪು ಸಹ ಸಂಪೂರ್ಣವಾಗಿ ದೋಷಪೂರಿತವಾಗಿದೆ ಎಂದು ಮೇಲ್ಮನವಿಯಲ್ಲಿ ಮುಖ್ಯಮಂತ್ರಿ ಆಕ್ಷೇಪಿಸಿದ್ದಾರೆ.
ಆದ್ದರಿಂದ ಏಕಸದಸ್ಯ ಪೀಠದ ಆದೇಶವೂ ನಿರಂಕುಶ, ಸ್ವೇಚ್ಛಾನುಸಾರ ಮತ್ತು ಕಾನೂನುಬಾಹಿರವಾಗಿದೆ. ಆದ್ದರಿಂದ ಆ ತೀರ್ಪು ಮತ್ತು ರಾಜ್ಯಪಾಲರ ಆದೇಶವನ್ನು ರದ್ದುಪಡಿಸಬೇಕು ಎಂದು ಮುಖ್ಯಮಂತ್ರಿ ಮೇಲ್ಮನವಿಯಲ್ಲಿ ಕೋರಿದ್ದಾರೆ.

Previous articleಮತ್ತೆ ಮುಷ್ಕರಕ್ಕೆ ಮುಂದಾದ ೧೦೮ ಅಂಬುಲೆನ್ಸ್ ಸಿಬ್ಬಂದಿ
Next article೨೪ಕ್ಕೆ ಕೆ-ಸೆಟ್ ಪರೀಕ್ಷೆ