೧೪ ವರ್ಷಗಳ ಹಿಂದಿನ ಘಟನೆ. ಮುಂಬೈನಲ್ಲಿ ಪಾಕ್ ಪ್ರೇರಿತ ಉಗ್ರರು ದಾಳಿ ನಡೆಸಿ ೧೬೬ ಜನರನ್ನು ಬಲಿ ತೆಗೆದುಕೊಂಡರು. ೨೩೮ ಜನ ಗಾಯಗೊಂಡರು. ಅಂದಿನ ಘಟನೆಯ ರೂವಾರಿಗಳು ತಹವರ್ ಹುಸೇನ್ ರಾಣಾ ಮತ್ತು ಡೇವಿಡ್ ಕೋಲ್ಮನ್ ಹೆಡ್ಲಿ. ಈಗ ಅಮೆರಿಕ ರಾಣಾನನ್ನು ಭಾರತಕ್ಕೆ ಒಪ್ಪಿಸಿದೆ. ಹೆಡ್ಲಿ ಇನ್ನೂ ಅಮೆರಿಕದಲ್ಲೇ ಇದ್ದಾನೆ. ಪಾಕ್ ತನ್ನ ಸಂಬಂಧವಿಲ್ಲ ಎಂದು ಕೇಳಿ ಕೈತೊಳೆದುಕೊಂಡಿದೆ. ಈಗ ರಾಣಾ ವಿಚಾರಣೆಯನ್ನು ಎನ್‌ಐಎ ತಂಡ ಕೈಗೊಂಡಿದ್ದು ಪಾಕ್ ಕೈವಾಡ ಬಯಲಾಗಲಿದೆ. ಇದುವರೆಗೆ ರಾಣಾ ಭಾರತಕ್ಕೆ ಕರೆತರುವ ಪ್ರಯತ್ನಗಳು ವಿಫಲವಾಗಿದ್ದವು. ಕೊನೆಗೂ ರಾಜತಾಂತ್ರಿಕ ಸಂಬಂಧಗಳು ಗೆದ್ದಿದ್ದು ಅಮೆರಿಕ ರಾಣಾನನ್ನು ವಿಚಾರಣೆಗೆ ಒಪ್ಪಿಸಿದೆ. ಇದು ಭಾರತದ ನಿಷ್ಪಕ್ಷಪಾತ ವರ್ತನೆಗೆ ಹಿಡಿದ ಕನ್ನಡಿಯಾಗಿದೆ. ರಾಣಾಗೆ ಯಾವುದೇ ಹಿಂಸೆ ನೀಡುವುದಿಲ್ಲ. ಆತನಿಂದ ಅಂದಿನ ಘಟನೆಯ ಹಿಂದೆ ಯಾರು ಯಾರು ಇದ್ದರು ಎಂಬ ಮಾಹಿತಿಯನ್ನು ಪಡೆಯಲಾಗುವುದು ಎಂದು ಅಮೆರಿಕಕ್ಕೆ ಸ್ಪಷ್ಟಪಡಿಸಲಾಗಿದೆ. ಸ್ವತಃ ಟ್ರಂಪ್ ಇದಕ್ಕೆ ಒಪ್ಪಿರುವುದು ವಿಶೇಷ.
ರಾಣಾ ಹುಟ್ಟಿದ್ದು ಪಾಕ್‌ನಲ್ಲಿ. ಕೆನಡಾ ಪ್ರಜೆ. ಪಾಕ್ ಸೇನೆಯಲ್ಲಿ ಕ್ಯಾಪ್ಟನ್ ಆಗಿ ಸೇವೆ ಸಲ್ಲಿಸಿದ್ದ. ಡೆನ್ಮಾರ್ಕ್ನಲ್ಲಿ ಉಗ್ರರೊಂದಿಗೆ ಸೇರಿ ನಡೆಸಿದ ಕೃತ್ಯಕ್ಕೆ ಈತನಿಗೆ ಅಮೆರಿಕ ಶಿಕ್ಷೆ ವಿಧಿಸಿತ್ತು. ಭಾರತ ಆಗ ಮುಂಬೈ ದಾಳಿಯಲ್ಲಿ ಈತನ ಪಾತ್ರದ ಬಗ್ಗೆ ದಾಖಲೆಗಳನ್ನು ನೀಡಿ ಗಡಿಪಾರು ಮಾಡುವಂತೆ ಹೇಳಿತ್ತು. ಆಗ ಅಮೆರಿಕ ನ್ಯಾಯಾಲಯ ಒಪ್ಪಿರಲಿಲ್ಲ. ಸುದೀರ್ಘ ವಿಚಾರಣೆ ನಡೆದು ಕೊನೆಗೆ ಗಡಿಪಾರು ಮಾಡಲು ಅಲ್ಲಿಯ ನ್ಯಾಯಾಲಯ ಒಪ್ಪಿತು. ಈಗ ೧೨ ಜನ ಎನ್‌ಐಎ ತಂಡ ವಿಚಾರಣೆ ನಡೆಸಲಿದೆ. ದಾಳಿಯಲ್ಲಿ ಈತನ ಪಾತ್ರ, ಲಷ್ಕರ್ ಎ ತೊಯ್ಬ ಮತ್ತು ಹೂಜಿ ಜತೆ ಸಂಬಂಧ, ಪಾಕ್ ಐಎಸ್‌ಐ ಗುಪ್ತಚರ ಸಂಸ್ಥೆಯೊಂದಿಗೆ ಈತನ ಸಖ್ಯದ ಬಗ್ಗೆ ವಿಚಾರಣೆ ನಡೆಯಲಿದೆ. ರಾಣಾಗೆ ಆರ್ಥಿಕ ಬೆಂಬಲ ಯಾರದು ಎಂಬುದು ಬಹಿರಂಗಗೊಳ್ಳಬೇಕಿದೆ. ಪಾಕ್ ಪ್ರಕಾರ ಹೆಡ್ಲಿ ದೊಡ್ಡ ಮೀನು. ಆತನನ್ನು ಅಮೆರಿಕ ಬಿಟ್ಟುಕೊಟ್ಟಿಲ್ಲ. ರಾಣಾ ಹೆಡ್ಲಿಗೆ ಸಹಾಯಕನಾಗಿ ಕೆಲಸ ಮಾಡಿದ್ದ. ಈತನಿಗೆ ಹೆಚ್ಚು ಗೊತ್ತಿಲ್ಲ. ಆದರೆ ರಾಣಾ ಬಾಯಿ ಬಿಟ್ಟರೆ ಪಾಕ್ ಬಣ್ಣ ಬಯಲಾಗುವುದಂತೂ ಖಂಡಿತ. ಡೇವಿಡ್ ಹೆಡ್ಲಿ ಮೂಲ ಹೆಸರು ದಾವುದ್ ಸಯೀದ್ ಜಿಲಾನಿ. ಈತನ ತಂದೆ ಪಾಕ್‌ನಲ್ಲಿ ಅಮೆರಿಕ ದೂತಾವಾಸದಲ್ಲಿದ್ದರು. ಹೆಡ್ಲಿ ಮಾದಕ ವಸ್ತುಗಳ ಮಾರಾಟದಲ್ಲಿದ್ದ. ಅಮೆರಿಕದ ಪೊಲೀಸರಿಗೆ ಸಿಕ್ಕಿಬಿದ್ದು ಕೊನೆಗೆ ಅವರಿಗೇ ಮಾಹಿತಿದಾರನಾದ. ಅವನೇ ಭಾರತಕ್ಕೆ ಹೋಗಿ ದಾಳಿ ನಡೆಸಬೇಕಾದ ಸ್ಥಳವನ್ನು ಗುರುತಿಸಿದ ಎಂಬುದು ಪಾಕ್ ವಿವರಣೆ. ಈಗ ರಾಣಾ ವಿಚಾರಣೆಯಿಂದ ಹೆಡ್ಲಿ ಪಾತ್ರವೂ ಬಹಿರಂಗಗೊಳ್ಳಲಿದೆ. ಅಲ್ಲದೆ ಪಾಕ್ ಪಾತ್ರವೂ ಸ್ಪಷ್ಟಗೊಳ್ಳಲಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಉಗ್ರ ಸಂಘಟನೆಗಳನ್ನು ಮಟ್ಟ ಹಾಕಬೇಕೆಂಬ ಕೂಗಿಗೆ ಇದು ಇಂಬು ಕೊಡುತ್ತದೆ. ಟ್ರಂಪ್ ಕೂಡ ರಾಣಾ ಬಹಳ ಅಪಾಯಕಾರಿ ಉಗ್ರ ಎಂದು ಬಣ್ಣಿಸಿದ್ದಾರೆ. ಈಗ ರಾಣಾ ಭಾರತಕ್ಕೆ ಬಂದಿರುವುದೂ ರಾಜಕೀಯ ಕೆಸರು ಎರಚಾಟಕ್ಕೆ ದಾರಿ ಮಾಡಿಕೊಟ್ಟಿದೆ. ಇದು ಮೋದಿ ಜಯ ಎಂದು ಆಡಳಿತ ಪಕ್ಷದವರು ಹೇಳಿದ್ದರೆ ಪ್ರತಿಪಕ್ಷದವರು ಇದನ್ನು ಅಲ್ಲಗಳೆದಿದ್ದಾರೆ. ಮುಂಬೈನಲ್ಲಿ ನಡೆದ ಅಂದಿನ ಘಟನೆ ಇಡೀ ಜಗತ್ತನ್ನೇ ನಡುಗಿಸಿತ್ತು. ಮುಂಬೈ ಪೊಲೀಸರು ದಿಟ್ಟತನದಲ್ಲಿ ಹೋರಾಡಿ ಉಗ್ರರನ್ನು ಸದೆಬಡಿದಿದ್ದರು.
ಮುಂಬೈನಲ್ಲಿ ಅಂದು ನಡೆದ ಹತ್ಯಾಕಾಂಡವನ್ನು ಇಂದಿಗೂ ಮರೆಯುವ ಹಾಗಿಲ್ಲ. ಪೊಲೀಸ್ ಅಧಿಕಾರಿಗಳಾದ ಹೇಮಂತ್ ಕರ್ಕರೆ, ಅಶೋಕ್ ಕಾಮ್ಟೆ, ವಿಜಯ್ ಸಾಲಸ್ಕರ್, ತುಕಾರಾಂ ಓಂಬ್ಲೆ, ಬೆಂಗಳೂರಿನ ಎನ್‌ಎಸ್‌ಸಿ ನಾಯಕ ಸಂದೀಪ್ ಉನ್ನಿಕೃಷ್ಣನ್, ಸಾರ್ಜಂಟ್ ಗಜೇಂದ್ರ ಸಿಂಗ್ ಬಿಷ್ಟ್ ಅವರ ತ್ಯಾಗ ಬಲಿದಾನವನ್ನು ಮರೆಯುವ ಹಾಗಿಲ್ಲ. ಉಗ್ರರಲ್ಲಿ ಕೈಸೆರೆಗೊಂಡ ಅಜ್ಮಲ್ ಕಸಬ್‌ನನ್ನು ನೇಣು ಹಾಕಿದಾಗಲೂ ಪಾಕ್ ಆತನ ಶರೀರವನ್ನು ತೆಗೆದುಕೊಳ್ಳಲು ಬರಲಿಲ್ಲ. ಇಂಥ ಭಯಾನಕ ಕೃತ್ಯಗಳ ರೂವಾರಿಯಾಗಿ ರಾಣಾ ಉಳಿದುಕೊಂಡಿದ್ದಾರೆ. ಅವರ ವಿಚಾರಣೆ ೧೪ ವರ್ಷಗಳ ನಂತರ ನಡೆಯುತ್ತಿದೆ. ಈಗಲಾದರೂ ಪ್ರಾಣ ತೆತ್ತವರ ಆತ್ಮಕ್ಕೆ ಶಾಂತಿ ಸಿಗಬಹುದು. ಅಂದು ಆರಂಭಗೊಂಡ ಉಗ್ರವಿರುದ್ಧ ಹೋರಾಟ ಇಂದಿಗೂ ಕೊನೆಗೊಂಡಿಲ್ಲ. ಜಗತ್ತಿನ ಯಾವುದೇ ಮೂಲೆಯಲ್ಲಿ ಉಗ್ರರ ದಾಳಿ ನಡೆದರೂ ಅದನ್ನು ಖಂಡಿಸುವ ಕೆಲಸವನ್ನು ಭಾರತ ಸತತವಾಗಿ ಕೈಗೊಳ್ಳುತ್ತ ಬಂದಿದೆ. ಅಲ್ಲದೆ ಉಗ್ರರಿಗೆ ಆರ್ಥಿಕ ನೆರವು ನೀಡುವವರನ್ನು ಮೊದಲು ಸದೆಬಡಿಯಬೇಕು ಎಂಬುದು ಭಾರತದ ಒತ್ತಾಯ. ಈಗ ರಾಣಾ ವಿಚಾರಣೆ ಮೂಲಕ ಭಾರತದ ನಿಲುವಿಗೆ ಜಾಗತಿಕ ಮಟ್ಟದಲ್ಲಿ ಮನ್ನಣೆ ಸಿಗುವ ಸಂದರ್ಭ ಬಂದಿದೆ. ರಾಣಾ ರೀತಿಯಲ್ಲೇ ಹೆಡ್ಲಿಯನ್ನೂ ಕರೆತರುವ ಕೆಲಸ ನಡೆಯಬೇಕಿದೆ. ಭಾರತದ ಈ ಪ್ರಯತ್ನಕ್ಕೆ ಎಲ್ಲ ದೇಶಗಳ ಬೆಂಬಲ ಸಿಗುವ ವಿಶ್ವಾಸ ಮೂಡಿದೆ.