ಚಿಕ್ಕಮಗಳೂರು: ತಲತಲಾಂತರದಿಂದ ಮೀಸಲಾತಿ ಮೂಲಕ ಏಳಿಗೆ ಕಂಡ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಸಮುದಾಯವು ಮೀಸಲಾತಿ ರದ್ದತಿ ಕುರಿತ ರಾಹುಲ್ ಗಾಂಧಿಯವರ ಹೇಳಿಕೆಯಿಂದ ಗಾಬರಿ ಆಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಶಾಸಕ ಮತ್ತು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‌ಕುಮಾರ್ ತಿಳಿಸಿದರು.
ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದಿದ್ದರೆ ಮೀಸಲಾತಿಯನ್ನು ರದ್ದು ಮಾಡಿಬಿಡುತ್ತಿತ್ತೇನೋ ಎಂಬಷ್ಟು ಆತಂಕ ನಿರ್ಮಾಣವಾಗಿದೆ. ಈ ಹೇಳಿಕೆಯನ್ನು ಖಂಡಿಸುತ್ತೇವೆ. ಮೀಸಲಾತಿಯನ್ನು ರದ್ದು ಮಾಡಲು ಬಿಜೆಪಿ ಬಿಡುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಮೀಸಲಾತಿಗೆ ನಾವು ಇವತ್ತು ಕೂಡ ಬದ್ಧರಿದ್ದೇವೆ. ಅದು ಮುಂದುವರೆಯಲಿದೆ. ರಾಹುಲ್ ಗಾಂಧಿಯವರ ಹೇಳಿಕೆಯನ್ನು ಈ ದೇಶದ ಜನರು ಸಮರ್ಥಿಸಲು ಸಾಧ್ಯವಿಲ್ಲ ಎಂದು ತಿಳಿಸಿದರು. ರಾಹುಲ್ ಅವರು ದೇಶದ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.