ಮೀಟರ ಬಡ್ಡಿದಂಧೇಕೋರರನ್ನು ಗಡಿಪಾರು ಮಾಡಿ

ಗದಗ : ಗದಗ ಜಿಲ್ಲೆಯಾದ್ಯಂತ ಬಡ್ಡಿ ದಂಧೆಕೋರ ಹಾವಳಿ ಮಿತಿಮೀರಿದ್ದು ಬಡ್ಡಿ ಬಕಾಸುರನೆಂದೇ ಖ್ಯಾತರಾಗಿರುವ ಯಲ್ಲಪ್ಪ ಮಿಸ್ಕಿನ್ ಮತ್ತು ಸಂಗಡಿಗರನ್ನು ಜಿಲ್ಲೆಯಿಂದ ಗಡಿಪಾರಿಗೆ ಆಗ್ರಹಿಸಿ ನೂರಾರು ಮಹಿಳೆಯರು ಬೃಹತ್ ಮೆರವಣಗೆ ನಡೆಸಿ ಪ್ರತಿಭಟನೆ ನಡೆಸಿದರು.
ನಗರದ ನ್ಯಾಯಾಲಯದ ವರ್ತುಳದಿಂದ ಪ್ರಾರಂಭವಾದ ನೂರಾರು ಮಹಿಳೆಯರಿದ್ದ ಮೆರವಣಿಗೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರತಿಭಟನಾ ಸಭೆಯಾಗಿ ಮಾರ್ಪಟ್ಟಿತು.
ಈ ಸಂದರ್ಭದಲ್ಲಿ ಮಾತನಾಡಿದ ಅಂಬಿಕಾ ಕಬಾಡಿ ಬಡ್ಡಿ ಬಕಾಸುರನೆಂದೇ ಖ್ಯಾತರಾಗಿರುವ ಯಲ್ಲಪ್ಪ ಮಿಸ್ಕೀನ ವಾರದ ಬಡ್ಡಿ, ತಿಂಗಳು ಬಡ್ಡಿ, ವಾಹನ ಅಡಮಾನ ಇಟ್ಟುಕೊಂಡು ಹಣ ನೀಡುತ್ತಿದ್ದಾರೆ. ಅಡಮಾನವಿಟ್ಟುಕೊಂಡಿರುವ ಆಸ್ತಿಗಳನ್ನು ಸಾಲ ತೀರಿದ ನಂತರವೂ ವಾಪಸ್ಸು ಕೊಡದೇ ಖರೀದಿ ಬರೆಯಿಸಿಕೊಂಡು ಸಾರ್ವಜನಿಕರು,ಮಹಿಳೆಯರನ್ನು ಹಿಂಸಿಸುತ್ತಿದ್ದಾರೆಂದು ಆರೋಪಿಸಿದರು.
ಯಲ್ಲಪ್ಪ ಮಿಸ್ಕಿನ್ ಹಾಗೂ ಸಹಟರರು ಅಮಾಯಕ ಜನರಿಂದ ದಬ್ಬಾಳಿಕೆಯಿಂದ ಆಸ್ತಿಯನ್ನ ಬರೆಸಿಕೊಂಡಿದ್ದು, ಇಂತವರ ವಿರುದ್ದ ಕ್ರಮ ಕೈಗೋಳ್ಳುವ ಅವಶ್ಯಕತೆ ಇದೆ. ಅಮಾಯಕರ ಆಸ್ತಿ ಲಪಟಾಯಿಸಲು ನಕಲಿ ಸಹಿ ಮಾಡುತ್ತಾರೆ. ಇವರಿಗೆ ಸಬ್ ರಜಿಸ್ಟರ್ ಅಧಿಕಾರಿಗಳು ಸಹಾಯ ಮಾಡುತ್ತಾರೆ ಅಂತ ಗಂಭೀರವಾಗಿ ಆರೋಪಿಸಿದರು.
ಬಡ್ಡಿ ದಂದೆಕೋರ ಯಲ್ಲಪ್ಪ ಮಿಸ್ಕಿನ್ ಅವರನ್ನ ಕೂಡಲೇ ಗಡಿಪಾರು ಮಾಡಬೇಕು. ಜೊತೆಗೆ, ಇವರ ಆಸ್ತಿಯನ್ನು ಮುಟ್ಟುಗೋಲು ಹಾಕಬೇಕು. ಅಮಾಯಕರಿಂದ ಪಡೆದಂತಹ ಚೆಕ್, ಬಾಂಡ್ ಸೇರಿದಂತೆ ಇತರೆ ದಾಖಲೆಗಳನ್ನ ಮೂಲ ಮಾಲೀಕರಿಗೆ ತಲುಪಿಸಬೇಕು. ಅನಧೀಕೃತ ಫೈನಾನ್ಸ್ ಗಳಿಗೆ ಕಡಿವಾಣ ಹಾಕಬೇಕೆಂದು ಆಗ್ರಹಿಸಿದರು.

ಬಡ್ಡಿ ದಂಧೆಕೋರರಿಗೆ ಯಾರ ಭಯವಿಲ್ಲದಂತಾಗಿದೆ. ಬಡ್ಡಿದಂಧೇಕೋರರು ಅಮಾಯಕರ ಜೀವ ಹಿಂಡುತ್ತಿದ್ದಾರೆ. ಬಡ್ಡಿಗೆ ಮೀಟರ್ ಬಡ್ಡಿ, ಚಕ್ರಬಡ್ಡಿ ಸೇರಿಸಿ ವಸೂಲಿ ಮಾಡುವುದರ ಜೊತೆಗೆ ಅನೇಕರ ಆಸ್ತಿಯನ್ನು ಕಬಳಿಸಿದ್ದಾರೆ. ಇಂಥವರ ವಿರುದ್ಧ ನಿರ್ಧಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕೇಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾಧ್ಯಕ್ಷ ಮಂಜುನಾಥಗೌಡ ಪರ್ವತಗೌಡರ ಸೇರಿದಂತೆ ನೂರಾರು ಜನ ಮಹಿಳೆಯರು,ಪುರುಷರು ಪಾಲ್ಗೊಂಡಿದ್ದರು.ಅಪರ ಜಿಲ್ಲಾಧಿಕಾರಿ ಅನ್ನಪೂರ್ಣ ನಾಗಪ್ಪ ಮುದಕಮ್ಮನವರ ಮನವಿ ಸ್ವೀಕರಿಸಿ ಸೂಕ್ತ ಕ್ರಮ ಕೈಗೊಳ್ಳುವದಾಗಿ ಭರವಸೆ ನೀಡಿದರು.