ಬಾಗಲಕೋಟೆ: ಮೈಕ್ರೋ ಫೈನಾನ್ಸ್ ಮತ್ತು ಮೀಟರ್ ಬಡ್ಡಿಯವರ ಕಿರುಕುಳ ನೀಡಿದರೆ ಅಂಥವರ ಮೇಲೆ ಕಾನೂನು ಕ್ರಮ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ಕಳೆದ ವಾರ ಆದೇಶದ ಜೊತೆಗೆ ಹೊಸ ಕಾನೂನು ಜಾರಿ ತಂದಿರುವ ಹಿನ್ನಲೆ ಶನಿವಾರ ಬನಹಟ್ಟಿಯಲ್ಲಿ ವ್ಯಕ್ತಿಯೋರ್ವರ ಮೇಲೆ ಕಿರುಕುಳ ನೀಡುತ್ತಿದ್ದ ಖಾಸಗಿ ಫೈನಾನ್ಸ್‌ನ ಇಬ್ಬರ ಮೇಲೆ ಪ್ರಕರಣ ದಾಖಲಿಸಿಕೊಂಡು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ವಿವರ: ಸಮೀಪದ ಬಂಡಿಗಣಿ ಗ್ರಾಮದ ರಾಜೇಶ್ವರಿ ಮಾದರ ಎಂಬುವರು ಜಮಖಂಡಿ ತಾಲೂಕಿನ ಹುನ್ನೂರ ಗ್ರಾಮದ ಸ್ಪಂದನಾ ಸ್ಫೂರ್ತಿ ಫೈನಾನ್ಸಿಯಲ್ ಬ್ಯಾಂಕ್‌ನಿಂದ 80 ಸಾವಿರ ರೂ.ಗಳಷ್ಟು ಸಾಲ ಪಡೆದಿದ್ದರು. ಇದಕ್ಕೆ ಪೂರ್ತಿಯಾಗಿ ಶೇ. 25ರಷ್ಟು ಮೀಟರ್ ಬಡ್ಡಿ ಆಕರಣೆಯಲ್ಲಿ ಮಾಸಿಕ 4,270/- ಹಣ ಭರಣಾ ಮಾಡಬೇಕಿತ್ತು. ಇಂದು ಬಂಡಿಗಣಿ ಗ್ರಾಮದ ಅವರ ನಿವಾಸಕ್ಕೆ ಆಗಮಿಸಿದ ಫೈನಾನ್ಸ್‌ನ ಸಿಬ್ಬಂದಿ ಸೋನು ಬಾಗಲಕೋಟ ಹಾಗೂ ದಾನಮ್ಮ ಸಾವಳಗಿಯವರು ಅವಾಚ್ಯ ಶಬ್ದಗಳಿಂದ ನಿಂದಿಸಿ, ತಕ್ಷಣ ಹಣ ನೀಡುವಂತೆ ಪೀಡಿಸಿದ್ದಾರೆ. ತೀವ್ರ ಕಂಗಾಲಾದ ಫರ‍್ಯಾಧಿ ರಾಜೇಶ್ವರಿ ಮಾದರ ತಕ್ಷಣ ಬನಹಟ್ಟಿ ಪೊಲೀಸ್ ಠಾಣೆಗೆ ತೆರಳಿ ಪ್ರಕರಣ ದಾಖಲಿಸಿದ್ದರ ಪರಿಣಾಮ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಶಕ್ಕೆ ಪಡೆದಿದ್ದಾರೆ. ಸಾಲ ವಸೂಲಿ ಕಿರುಕುಳಕ್ಕೆ ಕೆಲ ಪ್ರದೇಶಗಳಲ್ಲಿ ಇಡೀ ಗ್ರಾಮಗಳೇ ಮನೆ ಬಿಟ್ಟು ಗುಳೇ ಹೋಗಿವೆ. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ಕಟ್ಟಾಜ್ಞೆ ವಿಧಿಸಿದ್ದರೂ ಅಲ್ಲಲ್ಲಿ ಇಂಥಹ ಪ್ರಕರಣಗಳು ಮತ್ತೇ ಸಾಮಾನ್ಯವಾಗಿವೆ. ಈ ಕುರಿತು ಬನಹಟ್ಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪಿಎಸ್‌ಐ ಶಾಂತಾ ಹಳ್ಳಿ ತನಿಖೆ ಮುಂದುವರೆಸಿದ್ದಾರೆ.
                
























